ರಾಫೆಲ್ ಡೀಲ್​ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ರಾಫೆಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸಂಬಂಧ ಯಾವುದೇ ತನಿಖೆ ಅಗತ್ಯ ಇಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಜತೆಗೆ ರಾಫೆಲ್​ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಜಾ ಮಾಡಿರುವ ಸುಪ್ರೀಂಕೋರ್ಟ್​, ರಾಫೆಲ್​ ಡೀಲ್​ನಲ್ಲಿ ಯಾವುದೇ ಅನುಮಾನ ಕಂಡಿಲ್ಲ ಎಂದಿದೆ. ನವೆಂಬರ್​14 ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠ, ’36 ರಾಫೆಲ್​ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಲ್ಲ, ರಾಫೆಲ್​ ಡೀಲ್​​ನ ವಿಸ್ತೃತ ಪರಿಶೀಲನೆಯೂ ಅಗತ್ಯವಿಲ್ಲ. ಎಲ್ಲಾ ರಕ್ಷಣಾ ಒಪ್ಪಂದಗಳ ವಿಮರ್ಶೆ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ರಫೇಲ್​ ಯುದ್ಧ ವಿಮಾನದ ಬೆಲೆ ಮಾಹಿತಿ ನಮಗೆ ಬೇಕಿಲ್ಲ. ರಫೇಲ್​ ಯುದ್ಧ ವಿಮಾನದ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನವಿಲ್ಲ. ಹೀಗಾಗಿ ಸುಪ್ರೀಂಕೋರ್ಟ್​ ಮೇಲುಸ್ತುವಾರಿಯಲ್ಲಿ ತನಿಖೆ ಅಗತ್ಯ ಕಾಣಿಸುತ್ತಿಲ್ಲ’ ಎಂದಿದೆ.

ಸುಪ್ರೀಂ ತೀರ್ಪಿನ ಬೆನ್ನಲ್ಲೇ ನಿಟ್ಟುಸುರಿರು ಬಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿದೆ. ಫ್ರಾನ್ಸ್​ನೊಂದಿಗಿನ 36 ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದ್ದು, ಮೋದಿ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದೆ. ರಾಜಕೀಯ ಲಾಭಕ್ಕಾಗಿ ದೇಶದ ಜನರಿಗೆ ಸುಳ್ಳು ಹೇಳಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ದೇಶದ ಜನರನ್ನು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜನರಿಗೆ ಸುಳ್ಳು ಹೇಳಿದ್ದಕ್ಕಾಗಿ ದೇಶದ ಕ್ಷಮೆ ಕೇಳಬೇಕು, ನಿಮಗೆ ರಫೇಲ್​ ಡೀಲ್​ ಮಾಹಿತಿ ಸಿಕ್ಕಿದ್ದು ಎಲ್ಲಿಂದ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್​ ತೀರ್ಪು ಸುಳ್ಳು ಆರೋಪಕ್ಕೆ ಕಪಾಳಮೋಕ್ಷ ಎಂದು ಚಾಟಿ ಬೀಸಿದ್ದಾರೆ. ಇತ್ತ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಿದ್ದಕ್ಕೆ ಕ್ಷಮಾಪಣೆ ಕೋರಬೇಕು ಎಂದು ರಾಜನಾಥ್​ ಸಿಂಗ್​ ಸೇರಿದಂತೆ ಹಲವಾರು ನಾಯಕರು ಒತ್ತಾಯ ಮಾಡಿದ್ದಾರೆ.

ಇನ್ನು ಕಾಂಗ್ರೆಸ್​ ಬಿಜೆಪಿ ಮಾತಿಗೆ ತಿರುಗೇಟು ನೀಡಿದ್ದು, ಸುಪ್ರೀಂ ತೀರ್ಪಿನ ಪ್ರತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ ನೋಡಿ. ಯಾವುದೇ ಹಗರಣವಾಗಿಲ್ಲ ಎಂದು ಸುಪ್ರೀಂಕೋರ್ಟ್​ ಎಲ್ಲಿಯೂ ಹೇಳಿಲ್ಲ. ನಾವು ಸದನ ಸಮಿತಿ ರಚನೆಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದಿದೆ. ಇನ್ನು ಪ್ರಮುಖ ದೂರುದಾರ ಹಿರಿಯ ವಕೀಲ ಪ್ರಶಾಂತ್ ಭೂಷಣ್​, ಸುಪ್ರೀಂ ಕೋರ್ಟ್​ ತೀರ್ಪು ಒಪ್ಪಲು ಸಾಧ್ಯವೇ ಇಲ್ಲ. ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್​ ಮೂರು ಪ್ರಶ್ನೆಗಳನ್ನು ಕೇಳಿದ್ದು,

ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿದ್ದ ಒಪ್ಪಂದಕ್ಕಿಂತ ಮೋದಿ ಸರ್ಕಾರದಲ್ಲಿ 300 ಪಟ್ಟು ದರ ಏರಿಕೆ ಆಗಿದ್ದು ಯಾಕೆ?

ರಕ್ಷಣಾ ಕ್ಷೇತ್ರದಲ್ಲಿ 70 ವರ್ಷ ಅನುಭವ ಇರುವ ಸರ್ಕಾರಿ ಸಾಮ್ಯದ ಹೆಚ್​ಎಎಲ್​ ಬಿಟ್ಟು, ಅನನುಭವಿ ಹಾಗೂ ಸಾಲದ ಕೂಪದಲ್ಲಿ ಸಿಲುಕಿದ್ದ ರಿಲಯನ್ಸ್​ ಕಂಪನಿ ಆಯ್ಕೆ ಮಾಡಿದ್ದು ಯಾಕೆ?

ರಕ್ಷಣಾ ಕ್ಷೇತ್ರದಲ್ಲಿ ಯುದ್ಧ ವಿಮಾನ ಖರೀದಿಯಲ್ಲಿ ಡಿಪಿಪಿ ಮಾನದಂಡಗಳನ್ನು ಗಾಳಿಗೆ ತೂರಿ, ಅನಿಲ್​ ಅಂಬಾನಿ ಒಡೆತನದ ರಿಲಯನ್ಸ್​ ಕಂಪನಿಗೆ ಕೊಡಲು ಪ್ರಭಾವಿಸಿದ್ದು ಯಾಕೆ?

Leave a Reply