ಡಿಜಿಟಲ್ ಕನ್ನಡ ಟೀಮ್
ರಾಫೆಲ್ ಯುದ್ಧ ವಿಮಾನ ಖರೀದಿ ಹಗರಣ ಆರೋಪ ಮಾಡಿದ್ದ ಕಾಂಗ್ರೆಸ್ ಗೆ ಈಗ ಸುಪ್ರೀಂ ಕೋರ್ಟ್ ತೀರ್ಪು ತೀವ್ರ ಹಿನ್ನಡೆಯಾಗುವಂತೆ ಮಾಡಿದೆ. ಅದರೊಂದಿಗೆ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ರಾಫೆಲ್ ಆರೋಪವನ್ನು ಬ್ರಹ್ಮಾಸ್ತ್ರ ಎಂದು ಭಾವಿಸಿದ್ದ ಕಾಂಗ್ರೆಸ್ ಗೆ ಭ್ರಮನಿರಸನವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರಕ್ಕೆ ಮುಂದಾಗಿದೆ. ಕಾಂಗ್ರೆಸ್ ದೇಶದ ಜನರಿಗೆ ರಾಫೆಲ್ ಒಂದು ಹಗರಣ ಎಂಬ ಕಲ್ಪನೆ ಕಟ್ಟಿ ದೇಶದ ಭದ್ರತೆ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. 2004ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಕಾರ್ಗಿಲ್ ಶವ ಪೆಟ್ಟಿಗೆ ಹಗರಣದ ಸುಳ್ಳು ಆರೋಪ ಮಾಡಿ ಸೋಲಿಸಿದಂತೆ, 2019ರ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ಧ ರಾಫೆಲ್ ಹಗರಣದ ಷಡ್ಯಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅತ್ತ ರಾಜ್ಯ ಸಭೆಯಲ್ಲಿ ರಾಫೆಲ್ ಗದ್ದಲ ಜೋರಾಗಿದೆ.
ಬಿಜೆಪಿ ನಾಯಕರು ಹೇಳುವಂತೆ ಕಾಂಗ್ರೆಸ್ ಕಟ್ಟು ಕತೆ ಕಟ್ಟಿ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆಯೇ? ವಾಜಪೇಯಿ ವಿರುದ್ಧ ಮಾಡಿದ ಷಡ್ಯಂತ್ರವನ್ನು ಮೋದಿ ವಿರುದ್ಧ ಮಾಡಲು ಮುಂದಾಗಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.
ವಾಜಪೇಯಿ ವಿರುದ್ಧದ ಶವ ಪೆಟ್ಟಿಗೆ ಆರೋಪ ಏನು?
ಅದು 2003 ಹಾಗೂ 2004ರ ಸಮಯ. ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ತನ್ನ ಐದು ವರ್ಷಗಳ ಅವಧಿ ಪೂರ್ಣಗೊಳಿಸುವ ಹಂತಕ್ಕೆ ತಲುಪಿತ್ತು. ಆಗ ದೇಶದಲ್ಲಿ ಬಿಜೆಪಿ ವಿರುದ್ಧ ಕೇಳಿ ಬಂದ ಆರೋಪವೇ ಕಾರ್ಗಿಲ್ ಶವ ಪೆಟ್ಟಿಗೆ ಆರೋಪ.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಶವ ಪೆಟ್ಟಿಗೆ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್ ಹಾಗೂ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಆರೋಪ ಮಾಡಿದ್ದವು. ಇದಕ್ಕೆ ಮಾಧ್ಯಮಗಳ ಬೆಂಬಲವೂ ಸಿಕ್ಕಿ ದೇಶದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾಯಿತು.
ನ್ಯಾಯಾಲಯದ ಮೆಟ್ಟಿಲೇರಿದ ಈ ಪ್ರಕರಣ ಇತ್ಯರ್ಥವಾಗಲು ತೆಗೆದುಕೊಂಡಿದ್ದು ಬರೋಬ್ಬರಿ 9 ವರ್ಷ. ಈ ಪ್ರಕರಣದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹಾಗೂ ಮೂವರು ಸೇನಾಧಿಕಾರಿಗಳನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು.
2013ರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂದು ತೀರ್ಪು ಪ್ರಕಟಿಸಿತ್ತು. ಈ 9 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ 2 ಬಾರಿ ಲೋಕಸಭಾ ಚುನಾವಣೆ ಗೆದ್ದು ಅಧಿಕಾರ ನಡೆಸಿತ್ತು.
ಈಗಲೂ ಕಾಂಗ್ರೆಸ್ ಇದೇ ತಂತ್ರವನ್ನು ಮೋದಿ ಸರ್ಕಾರದ ವಿರುದ್ಧ ಪ್ರಯೋಗಿಸಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಕಾಂಗ್ರೆಸ್ ಕುತಂತ್ರ ಬಯಲಿಗೆಳೆದಿದೆ ಎಂದು ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.