ರಾಫೆಲ್ ಡೀಲಲ್ಲಿ ಅವ್ಯವಹಾರದ ಶಂಕೆ ಇಲ್ಲ, ತನಿಖೆ ಬೇಕಿಲ್ಲ: ಸುಪ್ರೀಂ ತೀರ್ಪು

ಡಿಜಿಟಲ್ ಕನ್ನಡ ಟೀಮ್

ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಫ್ರಾನ್ಸ್ ಜೊತೆಗಿನ ಜೊತೆಗಿನ ಮಹತ್ವದ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಸಾವಿರಾರು ಕೋಟಿ ಭ್ರಷ್ಟಾಚಾರದ ನಡೆಸಿದೆ ಎಂದು ಕಾಂಗ್ರೆಸ್ ಗುರುತರ ಆರೋಪ ಮಾಡಿತ್ತು. ಇದು ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸಿದ್ದು, ‘ಈ ಒಪ್ಪಂದದಲ್ಲಿ ಅವ್ಯವಹಾರ ಶಂಕೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ತನಿಖೆಯ ಅಗತ್ಯವಿಲ್ಲ’ ಎಂದು ಹೇಳುವ ಮೂಲಕ ಅರ್ಜಿ ವಜಾಗೊಳಿಸಿದೆ.

ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮುಖಭಂಗ ಅನುಭವಿಸಿದ್ದ ಬಿಜೆಪಿಗೆ ರಫೆಲ್ ಯುದ್ಧ ವಿಮಾನ ಪ್ರಕರಣದ ತೀರ್ಪು ನಿರಾಳತೆ ತಂದುಕೊಟ್ಟಿದೆ.

ಯುಪಿಎ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದಕ್ಕಿಂತ ಎನ್ಡಿಎ ಸರ್ಕಾರ ಹೆಚ್ಚು ಬೆಲೆಗೆ ಈ ವಿಮಾನ ಖರೀದಿಸಲಾಗುತ್ತಿದೆ. ಎಚ್ಎಎಲ್ ಬದಲಿಗೆ ಅನಿಲ್ ಅಂಬಾನಿ ಅವರ ನೂತನ ವಿಮಾನ ತಯಾರಿಕಾ ಕಂಪನಿಗೆ ಉದ್ದೇಶಪೂರ್ವಕವಾಗಿ ನೀಡಲಾಗಿದೆ. ಇದರೊಂದಿಗೆ ಅಂಬಾನಿ ಅವರ ಕಂಪನಿಗೆ 30 ಸಾವಿರ ಕೋಟಿ ಲಾಭ ಮಾಡಿಕೊಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ವಿಚಾರಣೆ ವೇಳೆ ರಾಫೆಲ್ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಪಡೆದಿತ್ತು. ಒಪ್ಪಂದದ ಮಾನದಂಡಗಳು, ಯುದ್ಧ ವಿಮಾನದ ತಾಂತ್ರಿಕ ಹಾಗೂ ಶಸ್ತ್ರ ಗುಣಮಟ್ಟ, ಯುಪಿಎ ಮಾಡಿಕೊಂಡಿದ್ದ ಒಪ್ಪಂದ ಹಾಗೂ ಎನ್ಡಿಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದಗಳ ನಡುವಿನ ವ್ಯತ್ಯಾಸ, ಒಪ್ಪಂದದ ಪ್ರಕ್ರಿಯೆ ಸೇರಿ ಇತರೆ ಅಂಶಗಳ ಕುರಿತು ಕೋರ್ಟ್ ವಿಚಾರಣೆ ನಡೆಸಿತು.

ನಂತರ ‘ಈ ಒಪ್ಪಂದದ ಪ್ರಕ್ರಿಯೆ ಕಾನೂನಿನ ವ್ಯಾಪ್ತಿಯಲ್ಲೇ ನಡೆದಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿಲ್ಲ. ಹೀಗಾಗಿ ಪ್ರಕರಣದ ವಿಚಾರವಾಗಿ ತನಿಖೆ ಅಗತ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Leave a Reply