ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಆಡಳಿತವೇ ಮಾದರಿ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗ, ಅವರ ಚಾಕಚಕ್ಯತೆ ಅತೀ ವೇಗ ಜನರನ್ನು ಚಕಿತಗೊಳಿಸಿತ್ತು. ಬೇರೆ ನಾಯಕರಿಗಿಂತಲೂ ವಿಭಿನ್ನ ಯೋಚನಾ ಲಹರಿ ಕೆಲವೊಮ್ಮೆ ಮೂಕವಿಸ್ಮಿತರನ್ನಾಗಿಯೂ ಮಾಡಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಉಪ ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಜನಮೆಚ್ಚಿದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ದೇಶ – ವಿದೇಶಗಳ ಪ್ರವಾಸ ಕೈಗೊಂಡಾಗ ವಿದೇಶಿ ನಾಯಕರು ಪ್ರಧಾನಿಯನ್ನು ಕೊಂಡಾಡುವುದನ್ನು ಕಂಡರೆ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎನ್ನುವುದು ಕಮಲ ಕಾರ್ಯಕರ್ತರ ಮಾತಾಗಿತ್ತು. ಮುಂದಿನ ಲೋಕಸಭಾ ಚುನಾವಣೆಗೂ ಮೋದಿ ಒಬ್ಬರನ್ನೇ ತೋರಿಸಿಕೊಂಡು ಮತ ಪಡೆಯುವ ಯೋಜನೆಯನ್ನು ಬಿಜೆಪಿ ರೂಪಿಸುತ್ತಿತ್ತು. ಇದೀಗ ಮುಕ್ತಾಯವಾದ ಪಂಚ ರಾಜ್ಯ ಚುನಾವಣೆ ಮೋದಿ ಅಂಡ್ ಟೀಂನ ಯೋಜನೆಗಳು ತಲೆ ಕೆಳಗಾಗುವಂತೆ ಮಾಡಿರೋದು ಮೋದಿಯನ್ನು ಕರ್ನಾಟಕದತ್ತ ಚಿತ್ತ ಹರಿಸುವಂತೆ ಮಾಡಿದೆ.

ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ ಮಹತ್ವದ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ, ಹಂತ ಹಂತವಾಗಿ ಸಾಲಮನ್ನಾ ಮಾಡಲು ರೂಪುರೇಷೆ ಸಿದ್ಧಮಾಡಿಕೊಂಡಿದ್ದಾರೆ. ಇದೀಗ ದೇಶಾದ್ಯಂತ ಕಾಂಗ್ರೆಸ್ ಕೂಡ ರೈತರ ಸಾಲಮನ್ನಾ ಯೋಜನೆ ಬಗ್ಗೆ ಪ್ರಚಾರ ಮಾಡಿ ಗೆಲುವಿನ ಕೇಕೆ ಹಾಕಿದೆ. ಇದ್ರಿಂದ ಎಚ್ಚೆತ್ತಿರುವ ಪ್ರಧಾನಿ ನರೇಂದ್ರ ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದಿಂದ ಮಾಹಿತಿ ಕೋರಿದೆ. ಸಾಲಮನ್ನಾ ಮಾಡುತ್ತಿರುವ ವಿಧಾನ, ಯೋಜನೆ, ಹಣ ಕ್ರೂಢಿಕರಣ ಸೇರಿದಂತೆ ಸಂಪೂರ್ಣ ಸಾಲಮನ್ನಾದ ಮಾಹಿತಿ ಕೊಡಿ ಎಂದು ಕೇಳಿದೆಯಂತೆ.

ಕಳೆದ ತಿಂಗಳು ರೈತಪರ ಸಂಘಟನೆಗಳು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು ಕ್ಯಾರೆ ಎನ್ನದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದ್ದಕ್ಕಿದ್ದ ಹಾಗೆ ರೈತರನ್ನು ಸಂತೈಸಲು ಮುಂದಾಗಿದೆ. ರೈತರು ಬೆಂಬಲ ಬೆಲೆ ನೀಡಿ ಸಾಕು, ನಮಗೆ ಸಾಲಮನ್ನಾ ಬೇಡ ಎಂದು ಅಂಗಲಾಚುತ್ತಿದ್ದರು,‌ ಆಗಲು ಕಿವಿಗೊಡದ ಕೇಂದ್ರ ಸರ್ಕಾರ, ಪಂಚರಾಜ್ಯದ ಸೋಲಿನಿಂದ ಕಣ್ತೆರೆದಿದೆ. ಲೋಕಸಭಾ ‌ಚುನಾವಣೆ ಸಮೀಪಿಸುತ್ತಿದ್ದಂತೆ ಸಾಲಮನ್ನಾದ ಬಾಣ ಬಿಡುವ ಮೂಲಕ ಅನ್ನದಾತನನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗಿದೆ.

ಮುಂದಿನ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕೇಸರಿ ಪಡೆ ದೇಶದ ಕೃಷಿಕರನ್ನು ಮೆಚ್ಚಿಸುವ ತಂತ್ರವಿರಬಹುದು ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಮೋದಿ ಕಾರ್ಯವೈಖರಿಯಿಂದ ಕುಪಿತಗೊಂಡಿರುವ ರೈತರನ್ನು ಸಂತೈಸಲು ಇರುವ ಒಂದೆ ಒಂದು ಅಸ್ತ್ರ ಎಂದರೆ ಸಾಲಮನ್ನಾ. ಇದನ್ನು ಅರಿತಿರುವ ಪ್ರಧಾನಿ ಮೋದಿ, ದೇಶದ 26 ಕೋಟಿ ರೈತರಿಗೆ ನೆರವಾಗುವಂತೆ 4 ಲಕ್ಷ ಕೋಟಿ ಸಾಲಮನ್ನಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯದ ಮೈತ್ರಿ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಮಾದರಿಯಾಗಿ ತೆಗೆದುಕೊಂಡಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಸರಿ.

Leave a Reply