ಸಕ್ಕರೆ ಕಾರ್ಖಾನೆ ಬಾಯ್ಲರ್​ ಸ್ಫೋಟ, ನಾಲ್ವರ ದುರ್ಮರಣ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ ಅವರ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಮುಧೋಳದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಬಾಯ್ಲರ್​ ಸ್ಫೋಟಕ್ಕೆ ಕಾರ್ಖಾನೆಯ ಛಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಪರಿಣಾಮ ದುರ್ಘಟನೆಯಲ್ಲಿ ಹಲವು ಕಾರ್ಮಿಕರು ಗಾಯಗೊಂಡಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಛಾವಣಿ ಕುಸಿದುಬಿದ್ದಿದ್ದರಿಂದ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಮಧ್ಯೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಕುಳಲಿ ಗ್ರಾಮದ ನಾಗಪ್ಪ ಧರ್ಮಟ್ಟಿ(40), ಆಫ್ಜಲಪುರದ ಶರಣಪ್ಪ ತೋಟದ್(35), ನಾವಲಗಿ ಗ್ರಾಮದ ಜಗದೀಶ್ ಪಟ್ಟಣಶೆಟ್ಟಿ(33), ಸಪ್ಪಡ್ಲ ಗ್ರಾಮದ ಶಿವಾನಂದ ಹೊಸಮಠ(42) ಎಂಬುವವರು ಮೃತಪಟ್ಟವರಾಗಿದ್ದಾರೆ.

ಈ ಘಟನೆ ನಡೆದ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕ ಮುರುಗೇಶ್ ನಿರಾಣಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ದುರ್ಘಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ‘ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಡಿಸ್ಟಿಲರಿ ಘಟಕದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ನಾಲ್ವರು ಸತ್ತಿರುವುದು ಅತ್ಯಂತ ದುಃಖದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತಾಗಬೇಕು. ಈ ಸಂಬಂಧ ನಾನು ಈಗಾಗಲೇ ಶಾಸಕರಾದ ಶ್ರೀ ಮುರುಗೇಶ್ ನಿರಾಣಿ ಅವರ ಜೊತೆ ಮಾತನಾಡಿದ್ದೇನೆ. ದುರ್ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕೂಡ ಸೂಚಿಸಿರುವೆ’ ಎಂದು ತಿಳಿಸಿದರು.

ಮುರುಗೇಶ್ ನಿರಾಣಿ ಸ್ಪಷ್ಟನೆ…

ಈ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಖಾನೆ ಮಾಲೀಕ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ, ‘ಸಕ್ಕರೆ ಕಾರ್ಖಾನೆಯ ಕಲುಷಿತ ನೀರಿನ ಪ್ಲಾಂಟ್​ನ ಡೈಜೆಸ್ಟ್ ಎಂಬ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ. ಇಲ್ಲಿ ಮಿಥೇಲ್ ಉತ್ಪತ್ತಿಯಾಗುತ್ತದೆ. ಉತ್ಪತ್ತಿಯಾದ ಮಿಥೇಲ್ ಹೊರ ಹೋಗದೇ ಒತ್ತಡ ಹೆಚ್ಚಾಗಿ ಬ್ಲಾಯ್ಲರ್ ಸ್ಫೋಟವಾಗಿದೆ. ಈ ಘಟಕದಲ್ಲಿ ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.

Leave a Reply