ಸುಳ್ವಾಡಿ ಮಾರಿ ಬಲಿ ಪಡೆದಿದ್ದು ಹೇಗೆ..?

ಡಿಜಿಟಲ್ ಕನ್ನಡ ಟೀಮ್:

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇಗುಲದ ಪ್ರಸಾದ 14 ಜನರನ್ನು ಬಲಿ ಪಡೆದಿದೆ. ಟೊಮ್ಯಾಟೊ ಬಾತ್‌ಗೆ ವಿಷ ಬೆರೆಸಿದ್ರಿಂದ ಪ್ರಸಾದವೆಂದು ಸೇವಿಸಿದ 95ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದು ಮೈಸೂರು‌ ಸೇರಿದಂತೆ ಹಲವಾರು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ದಿನನಿತ್ಯ ಒಬ್ಬೊಬ್ಬರೇ ಆಸ್ಪತ್ರೆಯಲ್ಲಿ ಸಾವನ್ನಪ್ಪತ್ತಿದ್ದು, ಮತ್ತಷ್ಟೂ ಭಕ್ತರು ಪ್ರಾಣತೆತ್ತುವ ಸಾಧ್ಯತೆ ದಟ್ಟವಾಗಿದೆ. ಇಂದೂ ಕೋಟೆಪೊದೆ ಗ್ರಾಮದ ಮೈಲಿಬಾಯಿ ಎಂಬ ಮಹಿಳೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ದುರಂತ ಎಂದರೆ ಮೃತ ಮೈಲಿಬಾಯಿ ಪತಿ ಕೃಷ್ಣ ನಾಯಕ್ ಮೊನ್ನೆಯಷ್ಟೇ ಪ್ರಸಾದ ಸೇವಿಸಿ ಅಸುನೀಗಿದ್ದರು. ಇದೀಗ ಅಪ್ಪ, ಅಮ್ಮನ ಸಾವಿನಿಂದ ಮೂವರು ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳಾದ ರಾಣಿ, ಪ್ರಿಯಾ, ರಾಜೇಶ್ ದಿಕ್ಕು ತೋಚದಂತೆ ಆಗಿದ್ದಾರೆ.

ಜೆಎಸ್ಎಸ್ ಆಸ್ಪತ್ರೆಯ ಶವಗಾರದಲ್ಲಿ ಮೃತರ ಸಂಬಂಧಿಕರ ರೋಧನ ಕಂಡು ಸಚಿವ ಜಿ.ಟಿ ದೇವೇಗೌಡ ಕೂಡ ಕಣ್ಣೀರು ಹಾಕಿದರು. ಮೃತ ಮೈಲಿಬಾಯಿ ಪಾರ್ಥಿವ ಶರೀರದ ಬಳಿ ಭಾವುಕರಾದ ಸಚಿವ ಜಿಟಿಡಿ, ಮೈಲಿಬಾಯಿ ಮಗಳು ಪ್ರಿಯಾಬಾಯಿ ಅವರನ್ನು ಮಾತನಾಡಿಸಿದ್ರು, ಧೈರ್ಯ ಹೇಳಿದ್ದರು.. ಜೊತೆಗೆ ಪ್ರಿಯಾಬಾಯಿ ಬಳಿ ಅವರ ಮನೆ ವಿಳಾಸ ಬರೆಸಿಕೊಂಡರು.. ಕೆಆರ್ ಆಸ್ಪತ್ರೆ ಶವಾಗಾರದ ಬಳಿ ಪ್ರಿಯಾ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರು ಹಾಕುತ್ತಿರುವ ಗೆಳತಿ ಪ್ರಿಯಾಳನ್ನು ನೋಡಲು ಕಾಲೇಜು ಗೆಳತಿಯರು ಆಗಮಿಸಿದ್ರು. ಆಕೆಯನ್ನು ಸಮಾಧಾನ ಮಾಡಲು ಯತ್ನಿಸಿದ್ರು. ಆ ಬಳಿಕ‌ ಮೃತದೇಹವನ್ನು ಸ್ವಗ್ರಾಮಕ್ಕೆ ರವಾನೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸುಳ್ವಾಡಿ ದುರಂತದ ಬಗ್ಗೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಸುದ್ದಿಗೋಷ್ಠಿ ನಡೆಸಿ, ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಟ್ಟು 101 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 45 ಮಂದಿಗೆ ಇನ್ನೂ ಕೂಡ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗ್ತಿದ್ದು, 56 ಮಂದಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 24 ಮಂದಿ ಇನ್ನೂ ಸಾಮಾನ್ಯ ಸ್ಥಿತಿಗೆ ಬಾರದ ಹಿನ್ನಲೆಯಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗ್ತಿದ್ದು, 3 ಜನರ ಸ್ಥಿತಿ ಗಂಭೀರ ಎಂದಿದ್ದಾರೆ. ಇದರ ನಡುವೆ ಮತ್ತೋರ್ವ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದೆ ಅನ್ನೋ ಮಾಹಿತಿ ಸಿಕ್ಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು‌ ಹೆಚ್ಚಾಗುತ್ತಾ ಅನ್ನೋ ಭೀತಿ ಉಂಟು ಮಾಡಿದೆ.

Leave a Reply