ಸಿಎಲ್ ಪಿ ಸಭೆಯಲ್ಲಿ ಸಂಪುಟ ವಿಸ್ತರಣೆ, ಅನುದಾನ, ಉ.ಕ ಶಾಸಕರಿಗೆ ಆದ್ಯತೆ ಚರ್ಚೆ, ಸಚಿವ ರಮೇಶ್ ಗೈರು!

  ಡಿಜಿಟಲ್ ಕನ್ನಡ ಟೀಮ್:

  ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಸುಗಮವಾಗಿ ನಡೆದಿದ್ದು, ಸಂಪುಟ ವಿಸ್ತರಣೆ, ಅನುದಾನ, ಉ.ಕ ಶಾಸಕರಿಗೆ ಆದ್ಯತೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.

  ಇದೇ ತಿಂಗಳು 22ರಿಂದ ಸಂಪುಟ ವಿಸ್ತರಣೆ ಬಗ್ಗೆ ಎದ್ದಿರುವ ಅನುಮಾನಗಳಿಗೆ ಆಕಾಂಕ್ಷಿಗಳಿಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕರು, ’22ರಂದು ಸಂಪುಟ ವಿಸ್ತರಣೆ ಆಗಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಹೊರಗೆ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ಯಾವುದೇ ನಾಯಕರು ನೀಡಬಾರದು’ ಎಂದು ಭರವಸೆ ನೀಡಿದ್ದಾರೆ.

  ಇನ್ನು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದಿವೆ. ಅಲ್ಲದೆ ಸಚಿವ ಸಂಪುಟ ಸಭೆ ವಿಸ್ತರಣೆ ವೇಳೆ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಡ ಹಾಕಲಾಯಿತು.

  ಜತೆಗೆ ಕಳೆದ ಸರ್ಕಾರಕ್ಕಿಂತ ಈ ಬಾರಿ ಕ್ಷೇತ್ರಗಳಿಗೆ ನೀಡಲಾಗುತ್ತಿರುವ ಅನುದಾನ ತೀರಾ ಕಡಿಮೆ ಇದೆ. ಕೇವಲ ₹ 50 ಲಕ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅನುದಾನ ಹೆಚ್ಚಿಸ ಬೇಕು ಎಂದು ಶಾಸಕರು ಮನವಿ ಇಟ್ಟರು.

  ಇನ್ನು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಶಾಸಕರಿಗೆ ಸೂಚನೆ ನೀಡಿದ ನಾಯಕರು, ‘ಲೋಕಸಭೆ ಚುನಾವಣೆ ಬಗ್ಗೆ ಎಲ್ಲರೂ ಗಮನಹರಿಸಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಅಸಮಾಧಾನ ಇರುವ ಕಡೆಗಳಲ್ಲಿ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಚುನಾವಣೆ ಎದುರಿಸುವಂತೆ ಮಾಡಬೇಕು. ಯಾವುದೇ ಅಸಮಾಧಾನ ಹಾಗೂ ಬಿಕ್ಕಟ್ಟಿಗೆ ಅವಕಾಶ ನೀಡಬಾರದು’ ಎಂದು ನಿರ್ದೇಶಿಸಲಾಗಿದೆ.

  ಮೈತ್ರಿ ಸರ್ಕಾರದಲ್ಲಿ ಸಚಿವರುಗಳ ನಡುವೆ ಸಂವಹನ ಕೊರತೆ ಕಾಣುತ್ತಿದೆ ಎಂಬ ದೂರು ವ್ಯಕ್ತವಾಗಿದ್ದು ಇದನ್ನು ಸರಿಪಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು.

  ರಮೇಶ್ ಜಾರಕಿಹೊಳಿ ಗೈರು!
  ಸಾಕಷ್ಟು ಮಹತ್ವ ಪಡೆದುಕೊಂಡಿದ್ದ ಸಿಎಲ್ ಪಿ ಸಭೆಗೆ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಜತೆಗೆ ಹಲವು ಶಾಸಾಕಾರೂಗಳ ಗೈರು ಎದ್ದು ಕಂಡಿತು.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ರಮೇಶ್ ಜಾರಕಿಹೊಳಿ ಅವರ ಗೈರಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಭೆಗೆ ಕೆಲವು ಶಾಸಕರು ಹಾಗೂ ನಾಯಕರ ಗೈರಿನ ಬಗ್ಗೆ ಮಾಹಿತಿ ಪಡೆದು, ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

  Leave a Reply