ಕಾವಿಯೊಳಗೆ ಅಡಗಿತ್ತು ವಿಷದ ಹಾವು!

ಡಿಜಿಟಲ್ ಕನ್ನಡ ಟೀಮ್:

ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮಲೆ ಮಹದೇಶ್ವರ ಬೆಟ್ಟದ ನಿವಾಸಿ ದುಂಡಮ್ಮ, ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದ್ರ ಬೆನ್ನಲ್ಲೇ ಸುಳ್ವಾಡಿ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷ ಹಾಕಿದ್ದು ಯಾರು ಅನ್ನೋ ಮಾಹಿತಿಯೂ ಹೊರಬಿದ್ದಿದೆ.

ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಮಾದೇಶ್‌ ಪತ್ನಿ ಅಂಬಿಕಾ, ಪೂಜಾರಿ ಮಹಾದೇವ ಸೇರಿದಂತೆ 15 ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿದ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಸ್ವಾಮೀಜಿ ಸೂಚನೆ ಮೇರೆಗೆ ತಾನೇ ಪ್ರಸಾದಕ್ಕೆ ವಿಷ ಹಾಕಿದ್ದಾಗಿ ಪೊಲೀಸರ ಮುಂದೆ ಅಂಬಿಕಾ ಬಾಯ್ಬಿಟ್ಟಿದ್ದಾಳೆ ಅನ್ನೋ ಮಾಹಿತಿ ಹೊರಬಿದ್ದಿದೆ. ದೇವಸ್ಥಾನದ ವ್ಯವಸ್ಥಾಪಕ ಮಾದೇಶನ ಪತ್ನಿಯಾಗಿರುವ ಅಂಬಿಕಾಳನ್ನು ಇಂದು ಮಧ್ಯಾಹ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಕೊಳ್ಳೇಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ ನೇತೃತ್ವದ ತನಿಖಾ ತಂಡ ತನಿಖೆಯನ್ನು ಅಂತಿಮ ಘಟ್ಟದ ಕಡೆಗೆ ಕೊಂಡೊಯ್ದಿದ್ದು, ಕಾವಿ ಒಳಗೆ ಕೊಲೆಪಾತಕ ಮನಸ್ಸು ಅಡಗಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ.

ಅನುಮಾನ ಹುಟ್ಟಿದ್ದು ಹೇಗೆ..?

ಪೂಜೆಯಲ್ಲಿ ಭಾಗಿಯಾಗಿ ಪ್ರಸಾದ ಸೇವಿಸಬೇಕಿದ್ದ ಈ ಸ್ವಾಮೀಜಿ, ಪ್ರಸಾದ ಸೇವನೆ ಮಾಡಿಲ್ಲ, ಆತನೇ ವಿಷ ಬೆರಸಿರುವ ಸಾಧ್ಯತೆ ಇದೆ ಎಂದು ಜನರು ಮಾತನಾಡ್ತಿದ್ರು. ಬಳಿಕ ಪೊಲೀಸರು ಕೂಡ ಮಹದೇವಸ್ವಾಮಿಯನ್ನು ಕರೆದು ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದರು. ಪೊಲೀಸರು ಬಿಡ್ತಿದ್ದ ಹಾಗೆ ವೈದ್ಯಕೀಯ ಸಹಾಯ ಪಡೆಯಲು ಮುಂದಾದ ಸ್ವಾಮೀಜಿ, ಸೋಮವಾರ ರಾತ್ರಿ ದಿಢೀರ್ ಎಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಇದ್ರಿಂದ ಅನುಮಾನಗೊಂಡ ಪೊಲೀಸರು, ಮತ್ತೊಮ್ಮೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟರು. ಇದ್ರಿಂದ ಗಲಿಬಿಲಿಗೊಂಡ ಸಾಲೂರು ಮಠದ ಕಿರಿಯ ಸ್ವಾಮೀಜಿ‌, ದೇವಾನ್ ಬುದ್ಧಿ ಅಲಿಯಾಸ್ ಇಮ್ಮಡಿ ಮಹದೇವಸ್ವಾಮಿ ಮೇಲೆ ಮತ್ತಷ್ಟು ಅನುಮಾನ ಬಂದಿತ್ತು. ಆ ಬಳಿಕ ಎರಡನೇ ಬಾರಿಗೆ ಸ್ವಾಮೀಜಿ ವಿಚಾರಣೆಗೆ ಗುರಿ ಪಡಿಸಿದ್ರು. ಆಗ ಸ್ವಲ್ಪ ಸುಳಿವು ಕೂಡ ಸಿಕ್ಕಿತ್ತು. ನಂತ್ರ ದೇವಸ್ಥಾನ ವ್ಯವಸ್ಥಾಪಕ ಮಾದೇಶ್‌ನ ಪತ್ನಿ ಅಂಬಿಕಾಳನ್ನು ಡ್ರಿಲ್ ಮಾಡ್ತಿದ್ದ ಹಾಗೆ ಕಾವಿ ತೊಟ್ಟ ಸನ್ಯಾಸಿ ಸೀರೆ ಸೆರಗಿನಲ್ಲಿ ನಿಂತು ವಿಷ ಕಕ್ಕಿರುವ ವಿಚಾರ ಬಯಲಾಗಿದೆ. ಬೆಳಗ್ಗೆ ಬಂಧನ ಮಾಡಿ ಕೋರ್ಟ್‌ಗೆ ಹಾಜರು ಮಾಡುವ ಸಾಧ್ಯತೆ ಇದೆ.

Leave a Reply