ಸರ್ಕಾರಿ ವೈದ್ಯಕೀಯ ಸೀಟು ದುಬಾರಿ! ಶುಲ್ಕ ಏರಿಸುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಐಆರ್ ಗಳಿಗೆ ಅವಕಾಶ ಕಲ್ಪಿಸುವ ಹಾಗೂ ಸರ್ಕಾರಿ ವೈದ್ಯಕೀಯ ಸೀಟುಗಳ ಶುಲ್ಕ ಹೆಚ್ಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಎಸ್.ವಿ ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೇಳಿದ್ದಿಷ್ಟು… ‘ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೋಲಿಸಿದರೆ, ವಿದ್ಯಾರ್ಥಿಗಳ ಶುಲ್ಕವೂ ಕಡಿಮೆಯಿದೆ. ಆದ್ದರಿಂದ ಈ ಕಾಲೇಜುಗಳ ಅಭಿವೃದ್ಧಿಗೆ ಹಾಗೂ ಸ್ವಾಯುತ್ತ ಸರಕಾರಿ ವೈದ್ಯಕೀಯ ಕಾಲೇಜುಗಳ ನಿರ್ವಹಣೆ ಶುಲ್ಕ ಏರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ತೀರ್ಮಾನಿಸಲಾಗುವುದು.

ವೈದ್ಯಕೀಯ ಕಾಲೇಜುಗಳಲ್ಲಿರುವ 150 ಸೀಟುಗಳನ್ನು 250ಕ್ಕೆ ಏರಿಸುವುದರೊಂದಿಗೆ, ಇದರಲ್ಲಿ ಎನ್ಆರ್ಐಗಳಿಗೆ ಸೀಟು ನೀಡುವುದರಿಂದ ಕಾಲೇಜಿಗೆ ಹೆಚ್ಚಿನ ಅನುದಾನ ಬರುತ್ತದೆ. ಇದರೊಂದಿಗೆ ಎಂಬಿಬಿಎಸ್ ಗೆ ಇರುವ ಶುಲ್ಕವನ್ನು 17ಸಾವಿರದಿಂದ 50 ಸಾವಿರಕ್ಕೆ ಹಾಗೂ ಪಿಜಿ ಕೋರ್ಸ್ ಗಳಿಗೆ 50ಸಾವಿರದಿಂದ 3 ಲಕ್ಷಕ್ಕೆ ಶುಲ್ಕ ಏರಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ. ಅನೇಕರು ಶಾಲಾ ಶಿಕ್ಷಣಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿರುವಾಗ, ಈ ಮೊತ್ತವನ್ನು ಭರಿಸಲು ಹೆಚ್ಚು ತೊಂದರೆಯಾಗುವುದಿಲ್ಲ.’

ವೇತನ ಏರಿಸುವ ಬಗ್ಗೆ ಚಿಂತನೆ:

ರಾಜ್ಯದಲ್ಲಿರುವ 16 ಸ್ವಾಯುತ್ತ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಗೆ 10 ಸಾವಿರ ಹಾಗೂ ಸ್ವಚ್ಛ ಮಾಡುವ ಸಿಬ್ಬಂದಿಗಳಿಗೆ 6-8 ಸಾವಿರ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸುವ ಬಗ್ಗೆ ಅನೇಕ ಒತ್ತಡಗಳು ಬರುತ್ತಿದೆ. ಆದರೆ 2006ರಲ್ಲಿ ಮಾಡಿದ ಕಾನೂನು ಇದಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಡಿಕೆಶಿ ತಿಳಿಸಿದರು.

Leave a Reply