‘ದೋಸ್ತಿ’ ವಿರುದ್ಧ ಕಡಿಮೆಯಾಗದ ಸಿದ್ದು ಕೋಪ..!

ಡಿಜಿಟಲ್ ಕನ್ನಡ ಟೀಮ್

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್​. ವಿಶ್ವನಾಥ್​ ಒಂದು ಕಾಲದಲ್ಲಿ ಕುಚಿಕು ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ವಿಶ್ವನಾಥ್​ ಕಾಂಗ್ರೆಸ್​ ನಾಯಕರಾಗಿ ಮಿಂಚಿದ್ರೆ, ಸಿದ್ದರಾಮಯ್ಯ ಜೆಡಿಎಸ್​ ನಾಯಕನಾಗಿ ಬೆಳೆದಿದ್ರು. 2004ರಲ್ಲಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಆದ ಬಳಿಕ ಮುಖ್ಯಮಂತ್ರಿ ಮಾಡಲಿಲ್ಲ ಅನ್ನೋ ಕೋಪದಲ್ಲಿ ಅಹಿಂದ ಕಟ್ಟಿಕೊಂಡು ರಾಜ್ಯ ಸುತ್ತಿದ್ರು. ಆ ಬಳಿಕ ಆಪ್ತರ ಜೊತೆ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸಿಎಂ ಕೂಡ ಆದರು. ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ನಾನೇ ಎಂದು ಹೆಚ್. ವಿಸದ್ವನಾಥ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಅಲ್ಲಗಳೆದಿದ್ದು, ಆಸ್ಕರ್ ಫರ್ನಾಂಡೀಸ್ ಕಾರಣ ಎಂದು ಹೇಳಿಕೊಂಡಿದ್ದಾರೆ.

ರಾಜಕೀಯ ಚದುರಂಗದಾಟದಲ್ಲಿ ಕಾಂಗ್ರೆಸ್‌ನಲ್ಲಿದ್ದ ಹೆಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಆಗಿದ್ದು, ಶಾಸಕರಾಗಿ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ. ಅದೇ ರೀತಿ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸೇರಿ, ಮುಖ್ಯಮಂತ್ರಿ ಆಗಿ, ಇವತ್ತಿಗೆ ರಾಜ್ಯ ಕಾಂಗ್ರೆಸ್‌ನ ಬಹುಮುಖ್ಯ ನಾಯಕ ಎನಿಸಿಕೊಂಡಿದ್ದಾರೆ. ಇವರಿಬ್ಬರೂ ಆತ್ಮೀಯ ಗೆಳೆಯರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸಂಬಂಧ ಹಳಸಿತ್ತು. ಆದ್ರೆ ಇದೀಗ ಕಾಂಗ್ರೆಸ್ – ಜೆಡಿಎಸ್ ರಾಜ್ಯದಲ್ಲಿ ದೋಸ್ತಿಯಾಗಿ ಅಧಿಕಾರ ಹಿಡಿದಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಸಮಿತಿ ರಚಿಸಿಕೊಂಡಿದ್ದು, ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾರೆ. ಅತ್ತಕಡೆ ಜೆಡಿಎಸ್ ಪಕ್ಷದ ರಾಜ್ಯಾಧ್ಯರಾಗಿ ವಿಶ್ವನಾಥ್ ಕೆಲಸ ಮಾಡ್ತಿದ್ದಾರೆ. ಆದರೆ ಇವರಿಬ್ಬರ ಕೋಪ ಇನ್ನೂ ಕೂಡ ಕಡಿಮೆ ಆಗಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ. ಅದು ಕುಡ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ.

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಅನ್ನೋ ಮಾತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಮಾಜಿ ಪ್ರಧಾನಿ ದೇವೇಗೌಡರೂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಆದ್ರೆ ಕೆಲವು ವರ್ಷಗಳ ಹಿಂದಿನ ದ್ವೇಷವನ್ನು ವಿಶ್ವನಾಥ್ ವಿರುದ್ಧ ಸಿದ್ದರಾಮಯ್ಯ ಹೊರಹಾಕಿದ್ದಾರೆ. ಇಷ್ಟು ದಿನ ಮೈತ್ರಿ ಸರ್ಕಾರ ಇದ್ದರೂ ನೇರವಾಗಿ ಮುಜುಗರ ಅನುಭವಿಸಿದ ಸಿದ್ದರಾಮಯ್ಯ, ಇಂದು ಬಹಿರಂಗವಾಗಿಯೇ ಮುಜುಗರ ಅನುಭವಿಸಿದ್ದಾರೆ. ಜೊತೆಗೆ ದ್ವೇಷವನ್ನೂ ಬಹಿರಂಗ ಮಾಡಿದ್ದಾರೆ.

ಇವತ್ತಿನ ಅಧಿವೇಶನದಲ್ಲಿ ಶಾಸಕ ಹೆಚ್.ವಿಶ್ವನಾಥ್​ ಪಕ್ಕದಲ್ಲೇ ಸಿದ್ದರಾಮಯ್ಯ ಅವರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ವಿಶ್ವನಾಥ್​ ಪಕ್ಕ ಕೂರಲು ಒಪ್ಪದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯ ಸಚೇತಕ ಗಣೇಶ ಹುಕ್ಕೇರಿಯನ್ನು ಗದರಿಸಿದ್ರು. ಕೂಡಲೇ ಕುರ್ಚಿ ಬದಲಿಸುವಂತೆ ಸಿದ್ದರಾಮಯ್ಯ ಸೂಚನೆ ಕೊಟ್ರು.‌ ಆದ್ರೆ ಸಿದ್ದರಾಮಯ್ಯ ಮಾತಿಗೆ ವಿಧಾನಸಭೆ ಸಿಬ್ಬಂದಿ ಕಿಂಚಿತ್ತು ಬೆಲೆ ಕೊಡಲಿಲ್ಲ. ಅನಿವಾರ್ಯವಾಗಿ ವಿಶ್ವನಾಥ್ ಪಕ್ಕದಲ್ಲೇ ಆಸೀನರಾದ್ರು. ಒಟ್ಟಾರೆ ಕೆಲವೇ ನಿಮಿಷಗಳು ನಡೆದ ಪ್ರಸಂಗ ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ದ್ವೇಷ ಎಷ್ಟಿದೆ ಅನ್ನೋದನ್ನು ತೋರಿಸಿಬಿಡ್ತು.

Leave a Reply