ವಿರೋಧ ಪಕ್ಷಗಳ ಮಹಾಘಟಬಂಧನ ಕೇವಲ ಭ್ರಾಂತಿ: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್:

‘ವಿರೋಧ ಪಕ್ಷಗಳ ಮಹಾಘಟಬಂಧನ ಎಂಬುದು ವಾಸ್ತವದಲ್ಲಿ ಇಲ್ಲ ಅದು ಕೇವಲ ಭ್ರಾಂತಿ…’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ರಾಜಕೀಯ ಎದುರಾಳಿಗಳನ್ನು ಟೀಕಿಸಿದ್ದಾರೆ.

ರಿಪಬ್ಲಿಕ್ ಸುದ್ದಿ ವಾಹಿನಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಸೋಲು, ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಸಿದ್ಧತೆ, ಎನ್ ಡಿ ಎ ಮಿತ್ರ ಪಕ್ಷಗಳ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಅಮಿತ್ ಶಾ ಅವರ ಮಾತಿನ ಸಾರಾಂಶ ಹೀಗಿದೆ…

‘ಮಹಾಘಟಬಂಧನ ಎಂಬುದು ವಾಸ್ತವದಲ್ಲಿ ಇಲ್ಲ ಅದು ವಿರೋಧ ಪಕ್ಷಗಳ ಭ್ರಮೆ. 2014ರ ಚುನಾವಣೆಯಲ್ಲಿ ನಾವು ಈ ಎಲ್ಲ ಪಕ್ಷಗಳ ವಿರುದ್ಧ ಹೋರಾಡಿ ಅವರನ್ನು ಮಣಿಸಿ ಅಧಿಕಾರಕ್ಕೆ ಬಂದಿದ್ದೇವೆ ಅದೇ ರೀತಿ ಅವರನ್ನು ಈ ಬಾರಿಯೂ ಎದುರಿಸುತ್ತೇವೆ. ಮಹಾಘಟಬಂಧನ ಹೆಸರಿನಲ್ಲಿ ಒಂದಾಗಿರುವ ಪಕ್ಷಗಳ ಪೈಕಿ ಬಹುತೇಕ ಪ್ರಾದೇಶಿಕ ಪಕ್ಷಗಳಾಗಿವೆ. ಒಂದು ರಾಜ್ಯದ ಪ್ರಾದೇಶಿಕ ಪಕ್ಷ ಮತ್ತೊಂದು ರಾಜ್ಯದಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಅಲ್ಲದೆ ಮಹಾಘಟಬಂಧನದಲ್ಲಿ ಯಾವ ಯಾವ ಪಕ್ಷಗಳು ಒಟ್ಟಾಗಿ ಕೈ ಜೋಡಿಸಲಿವೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಮುಂಬರುವ ಚುನಾವಣೆ ವೇಳೆ ಶಿವಸೇನೆ ನಮ್ಮ ಜೊತೆ ಕೈಜೋಡಿಸಲಿದೆಯೇ ಎಂಬ ವಿಶ್ವಾಸವಿದೆ ಈ ಬಗ್ಗೆ ಶಿವಸೇನೆ ಜೊತೆ ಮಾತುಕತೆ ನಡೆಯುತ್ತಿದ್ದು ಅವರ ಬೆಂಬಲ ಸಿಗುವ ನಿರೀಕ್ಷೆ ಇದೆ.

ಇತ್ತೀಚಿಗೆ ನಡೆದ ಮಧ್ಯಪ್ರದೇಶ ರಾಜಸ್ಥಾನ ಚತ್ತೀಸ್ ಗಡ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಜನರ ತೀರ್ಪನ್ನು ನಾವೂ ಸ್ವೀಕರಿಸುತ್ತೇವೆ. ಆದರೆ ಈ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೋಲಿಕೆ ಮಾಡುವುದು ಸರಿಯಲ್ಲ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಒಂದೇ ವಿಷಯಗಳ ಮೇಲೆ ನಡೆಯುವುದಿಲ್ಲ.

ಕಳೆದ ಐದು ವರ್ಷಗಳಲ್ಲಿ ನಾವು ರಾಷ್ಟ್ರೀಯ ಭದ್ರತೆಗಾಗಿ ತೆಗೆದುಕೊಂಡಿರುವ ಕ್ರಮಗಳು, ಭ್ರಷ್ಟಾಚಾರ ವಿರುದ್ಧದ ಹೋರಾಟ, 8 ಕೋಟಿ ಮನೆಗಳಿಗೆ ಶೌಚಾಲಯ ವ್ಯವಸ್ಥೆ, ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಲೋಕಸಭೆ ಚುನಾವಣೆಯಲ್ಲಿ ಈ ವಿಚಾರಗಳು ಪ್ರಮುಖ ಪಾತ್ರವಹಿಸುತ್ತವೆ. ನಾವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೇವೆ ಹೊರತು ಬೇರೆಯವರ ದೌರ್ಬಲ್ಯದ ಮೇಲೆ ಅಲ್ಲ.

ಕಳೆದ ಚುನಾವಣೆಗಿಂತ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಒಡಿಶಾ, ಈಶಾನ್ಯ ಹಾಗೂ ಪಶ್ಚಿಮ ಬಂಗಾಳದಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆಯಿದೆ
ಸದೃಡ ಸರಕಾರ ಸ್ಥಾಪಿಸುವುದು ಕೇವಲ ಬಿಜೆಪಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಅಗತ್ಯವಾಗಿದೆ.

2014ರಲ್ಲಿ ಬಿಜೆಪಿ ಕೇವಲ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ 16 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈಗ ಹೇಳಿ, 2019ರ ಚುನಾವಣೆಯಲ್ಲಿ ಯಾರು ಗೆಲ್ಲುವರೆಂದು? ಒಂದು ವೇಳೆ ಜನರ ಆದೇಶ ನಮ್ಮ ವಿರುದ್ಧ ಬಂದರು ನಾವು ಅದನ್ನು ಸ್ವೀಕರಿಸುತ್ತೇವೆ.’

Leave a Reply