ಸಾಲೂರು ಲಿಂಗಾಯತ ಮಠದಲ್ಲಿ ಗೂಂಡಾ ಸ್ವಾಮೀಜಿ..?

ಡಿಜಿಟಲ್ ಕನ್ನಡ ಟೀಮ್:

ಸ್ವಾಮೀ ಅಂದ್ರೆ ಸಮಾಜದಲ್ಲಿ ತನ್ನದೇ ಆದ ಗೌರವ ಇದೆ. ಸ್ವಾಮೀಜಿ ಆದವರು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾರೆ. ಜನರು ಯಾವಾಗಲೂ ಸುಖಿಯಾಗಿ ಇರಬೇಕು, ಸಮಾಜದಲ್ಲಿ ಶಾಂತಿ ನೆಲಸಬೇಕು ಅನ್ನೋದು ಸ್ವಾಮೀಜಿ, ಸಾಧು ಸಂತರ ಆಶಯವಾಗಿ ಇರಬೇಕು. ಆದ್ರೆ ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಸ್ವಾಮೀಜಿಯೇ ಹಣಕ್ಕಾಗಿ ವಿಷ ಹಾಕಿಸಿದ್ದಾರೆ ಎನ್ನಲಾಗಿದೆ. ಇಲ್ಲೀವರೆಗೂ 16 ಜನರ ಸಾವಿಗೆ ಕಾರಣವಾಗಿದ್ದು, ಸಾಲೂರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಎನ್ನಲಾಗಿದ್ದು, ತನಿಖೆ ಚುರುಕುಗೊಂಡಿದೆ. ಇದರ ನಡುವೆ ಸ್ವಾಮೀಜಿಯ ಒಂದೊಂದೇ ಕರ್ಮಕಾಂಡಗಳು ಬಯಲಾಗಿವೆ.

ವಿಷ ಪ್ರಸಾದದ ಮಾಸ್ಟರ್​ಮೈಂಡ್ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಗೆ ಸಾಕಷ್ಟು ಕ್ರಿಮಿನಿಲ್ ಹಿನ್ನೆಲೆ ಇದ್ದು, ಈ ಹಿಂದೆ ಅಧಿಕಾರಿಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು ಅನ್ನೋ ಅಂಶ ಬಯಲಾಗಿದೆ. ಸಂಗಮೇಶ್ ಎಂಬುವರಿಗೆ ಕಪಾಳಮೋಕ್ಷ ಮಾಡಿದ್ದು ಸಿಸಿಟಿವಿಯಲ್ಲೂ ಸೆರೆಯಾಗಿತ್ತು..

ಇನ್ನು ಜಮೀನಿನ ಸುತ್ತಲು ವಿದ್ಯುತ್ ತಂತಿ ಬಿಟ್ಟು ಆನೆ ಹತ್ಯೆ ಮಾಡಿದ ಆರೋಪ ಎದುರಾಗಿತ್ತು. ಆನೆ ಹತ್ಯೆ ಆರೋಪದ ಮೇಲೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು.. ಈ ವೇಳೆ ಬೇರೊಬ್ಬರನ್ನು ಪ್ರಕರಣದಲ್ಲಿ ಸಿಲುಕಿಸಿ, ತಾನು ಪ್ರಕರಣದಿಂದ ನುಣುಚಿಕೊಂಡಿದ್ದರು. ಅದೇ ರೀತಿ ಜಮೀನಿಗೆ ವಿದ್ಯುತ್ ಬಿಟ್ಟು ಬಾಲಕಿ ಬಲಿ ಪಡೆದ ಆರೋಪವೂ ಇಮ್ಮಡಿ ಮಹದೇವಸ್ವಾಮಿ ಮೇಲಿದೆ.. ಬಾಲಕಿ ಸಾವನ್ನಪ್ಪಿದ ನಂತ್ರ ಆಕೆಯ ಶವವನ್ನ ಬೇರೆ ಕಡೆ ಬಿಸಾಕಿದ್ರು ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿಸಿದ್ರು ಅನ್ನೋ ಅರೋಪವೂ ಇದೆ.

ಇನ್ನು ಮಹದೇಶ್ವರ ಬೆಟ್ಟದ ಸಾಲೂರು ಲಿಂಗಾಯತ ಮಠಕ್ಕೂ ಸುಳ್ವಾಡಿಯ ಮಾರಮ್ಮ ದೇಗುಲಕ್ಕೂ ಯಾವುದೇ ಸಂಬಂಧವಿಲ್ಲ.. ಆದ್ರೆ ಮಾರಮ್ಮ ದೇಗುಲದ ಪ್ರಖ್ಯಾತಿ ಗಮನಿಸಿದ ಇಮ್ಮಡಿ ಮಹದೇವಸ್ವಾಮಿ ಹಿಡಿತ ಸಾಧಿಸುವ ಉದ್ದೇಶದಿಂದ ಮಾರಮ್ಮ ಗುಡಿಯ ಮೊದಲ ಗುರುಗಳನ್ನು ಹತ್ಯೆ ಮಾಡಿಸಿದರು ಅನ್ನೋ ಆರೋಪ ಕೂಡ ಇದೆ. ಆ ಬಳಿಕ ಅಕ್ಕನ ಮಗಳಾದ ಅಂಬಿಕಾಳನ್ನು ಇದೇ ಊರಿನ ಮಾದೇಶ್ ಎಂಬಾತನಿಗೆ ಮದುವೆ ಮಾಡಿಸಿ ಕೊಟ್ಟು ಆತನನ್ನು ಟ್ರಸ್ಟ್‌ನ ಮ್ಯಾನೇಜರ್ ಮಾಡಿಕೊಂಡು ಹಣ ಲಪಟಾಯಿಸೋ ಯೋಜನೆ ಮಾಡಿಕೊಂಡಿದ್ದ ಈ ಸ್ವಾಮೀಜಿ ಅನ್ನೋ ಮಾತುಗಳು ಹಳ್ಳಿ ಜನರ ಬಾಯಲ್ಲಿ ಕೇಳಿ ಬರುತ್ತಿವೆ..

ಸ್ಥಳೀಯವಾಗಿ ಇಂದಿಗೂ ಕೂಡ ಗೂಂಡ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿರುವ ಇಮ್ಮಡಿ ಮಹದೇವಸ್ವಾಮಿಗೆ ಮಹಿಳೆಯರ ಸಂಗ ಹೆಚ್ಚಾಗಿದ್ದೆ ಎಂಬ ಆರೋಪಗಳಿವೆ. ಜೊತೆಗೆ ಸಾಲೂರು ಲಿಂಗಾಯತ ಮಠದ ಹಿರಿಯ ಸ್ವಾಮೀಜಿಗಳಿಗೆ ಇಮ್ಮಡಿ‌ ಮಹದೇವಸ್ವಾಮಿ ಕಾಟ ಕೊಡುತ್ತಿದ್ದ ಎನ್ನಲಾಗಿದ್ದು,ಒಂದೆರಡು ಬಾರಿ ಹಿರಿಯ ಶ್ರೀಗಳನ್ನು ಹೊಡೆದಿದ್ದ ಅನ್ನೋ‌ ಆರೋವಿದೆ. ಆದರೂ ಮಠದ ಹೆಸರು ಹಾಳಾಗುತ್ತದೆ ಅನ್ನೋ ಕಾರಣಕ್ಕೆ ಹೊಡೆಸಿಕೊಂಡು ಸುಮ್ಮನಿರ್ತಿದ್ರು ಎನ್ನುವ ಮಾತನ್ನು ಸ್ವತಃ ಹಿರಿಯ ಶ್ರೀಗಳಾದ ವೇದಬ್ರಹ್ಮ ಗುರುಸ್ವಾಮಿಗಳೇ ಒಪ್ಪಿಕೊಂಡಿದ್ದಾರೆ. ‌ಇದೀಗ‌ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯನನ್ನು ಬಂಧಿಸಲಾಗಿದೆ. ಹಣದ ಆಸೆಗೆ ಬಿದ್ದು 16 ಜನರ ಸಾವಿಗೆ ಕಾರಣರಾದ ಈ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಅನ್ನೋದು ಗ್ರಾಮಸ್ಥರ ಒತ್ತಾಯವಾಗಿದೆ.

Leave a Reply