ಮೇಕೆದಾಟು, ಮಹದಾಯಿ ಯೋಜನೆ ಕಾರ್ಯರೂಪಕ್ಕೆ ಸಂಸದರ ಒಗ್ಗಟ್ಟಿನ ಮಂತ್ರ

ಡಿಜಿಟಲ್ ಕನ್ನಡ ಟೀಮ್:

ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನ ಸಂಬಂಧ ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಹೋರಾಡಲು ಕರ್ನಾಟಕದ ಸಂಸದರು ಹಾಗೂ ನಾಯಕರು ನಿರ್ಣಯಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ದಿಲ್ಲಿ ನಿವಾಸದಲ್ಲಿ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಸಂಘಟಿಸಿದ್ದ ಕರ್ನಾಟಕ ಸಂಸದರ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರತಿರೋಧ ತೋರುತ್ತಿರುವ ತಮಿಳುನಾಡು ನಡೆಯನ್ನು ಪ್ರತಿಭಟಿಸಿ ದಿಲ್ಲಿಯಲ್ಲಿ ಗಾಂಧಿ ಪ್ರತಿಮೆ ಎದಿರು ಒಂದು ದಿನದ ಸಾಂಕೇತಿಕ ಪ್ರದರ್ಶನ ನಡೆಸಲು ಸಭೆ ತೀರ್ಮಾನಿಸಿತು.

ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ಅನಂತಕುಮಾರ ಹೆಗಡೆ, ಕರ್ನಾಟಕದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕಾವೇರಿ ಐತೀರ್ಪು, ಕಾವೇರಿ ನದಿ ಪ್ರಾಧಿಕಾರ, ಕಾವೇರಿ ನಿರ್ಹವಣಾ ಮಂಡಳಿ, ಕೇಂದ್ರ ಜಲ ಆಯೋಗ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ವ್ಯಾಪ್ತಿಯಲ್ಲಿ ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನಕ್ಕೆ ತರಲು ಕರ್ನಾಟಕ ಬದ್ಧವಾಗಿದೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿನಾಕಾರಣ ತಗಾದೆ ತೆಗೆಯುತ್ತಿದೆ. ಒಂದೇ ಒಂದು ಎಕರೆ ಭೂಮಿ ಕೃಷಿಗೆ ನೀರು ಬಳಸುವುದಿಲ್ಲ ಎಂದು ಪದೇ ಪದೇ ಹೇಳಿದರೂ ಆಲಿಸುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿಯಿಂದ ಹಿಡಿದು ಪ್ರತಿಪಕ್ಷ ಮುಖಂಡರವರೆಗೆ ಸರ್ವಪಕ್ಷ ನಾಯಕರ ಜತೆ ಮಾತುಕತೆಗೆ ಅವಕಾಶ ಕೇಳಿದರೂ ಕೊಡುತ್ತಿಲ್ಲ, ಇಲ್ಲಿಗೆ ಕರೆದರೂ ಬರುತ್ತಿಲ್ಲ. ರಾಜಕೀಯ ಕಾರಣಗಳಿಗಾಗಿ ತಮಿಳುನಾಡು ಪ್ರತಿರೋಧ ತೋರುತ್ತಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಸಭೆಗೆ ವಿವರಿಸಿದರು.

ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಮೊದಲಿಂದಲೂ ಪಕ್ಷಬೇಧ ಮರೆತು ಎಲ್ಲ ಸದಸ್ಯರೂ ಸಹಕರಿಸುತ್ತಾ ಬಂದಿದ್ದೀರಿ. ಈಗಲೂ ಅದೇ ಸಹಕಾರ ನಿರೀಕ್ಷಿಸುತ್ತಿದ್ದೇನೆ. ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡದೆ ಯೋಜನೆ ಅನುಷ್ಠಾನಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಹೇಳಿದರು.

ಸಂಸತ್ತಿನ ಒಳಗೆ ಮತ್ತು ಹೊರಗೆ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆಯವರು, ಸದಾನಂದಗೌಡರು ಸೇರಿದಂತೆ ಮುಖಂಡರು ಸಲಹೆ, ಸೂಚನೆ ನೀಡಿದರು.

Leave a Reply