ಸಂಪುಟ ಪುನಾರಚನೆಯೋ..? ವಿಸ್ತರಣೆಯೋ..? ಇಲ್ಲ…?!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 22 ಸಂಪುಟ ವಿಸ್ತರಣೆ ಎಂದು ಈಗಾಗಲೇ ಕಾಂಗ್ರೆಸ್ ನಾಯಕರು ಮಾಹಿತಿ ಕೊಟ್ಟಿದ್ದಾರೆ. ಅದರಂತೆ ದೆಹಲಿಯ ಹೈಕಮಾಂಡ್ ಸೂಚನೆ ಪಡೆಯುವ ಸಲುವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಪಂಚ ರಾಜ್ಯಗಳ‌ ಚುನಾವಣೆ ಪೈಕಿ ಮೂರರಲ್ಲಿ‌ ಜಯಭೇರಿ‌ ಬಾರಿಸಿದ ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ. ಒಂದಷ್ಟು ಚಟುವಟಿಕೆಗಳಿಗೂ ಇಂಬುಗೊಟ್ಟಿದೆ. ಚುನಾವಣಾ ಪ್ರಚಾರದಲ್ಲಿ ಆರ್ಭಟಿಸಿ ಧಣಿದಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ರಾಂತಿಗೆ ತೆರಳಿದ್ದಾರೆ. ಗುರುವಾರ ಶಿಮ್ಲಾಗೆ ಹೋಗಿರುವ ಅವರು, ಶುಕ್ರವಾರ ಸಂಜೆ ದೆಹಲಿಗೆ ವಾಪಸ್ ಆಗಲಿದ್ದು, ರಾಜ್ಯ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಭಾರೀ ಕುತೂಹಲ ಮೂಡಿಸಿದೆ. ಸಂಪುಟ ವಿಸ್ತರಣೆ ಆಗಬಹುದು, ಪುನಾರಚನೆಯೂ ಆಗಬಹುದು. ಏನು ಮಾಡಬೇಕೆಂದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದಿರುವ ಅವರು, ಆರು ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗಳಿಗೂ ನೇಮಕ ಮಾಡಲಾಗುವುದು ಎಂದಿದ್ದಾರೆ.

ಉಪಮುಖ್ಯಮಂತ್ರಿ‌ ಡಾ. ಜಿ. ಪರಮೇಶ್ವರ್ ಮಾತನಾಡಿ, ರಾಹುಲ್ ಗಾಂಧಿ ಭೇಟಿಗೆ ಇನ್ನು ಸಮಯ ನಿಗದಿಯಾಗಿಲ್ಲ. ಮಧ್ಯಾಹ್ನದ ಬಳಿಕ ಸಮಯ ನೀಡಬಹುದು. ರಾಹುಲ್ ಗಾಂಧಿ ಜೊತೆ ಚರ್ಚೆ ಬಳಿಕ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಈ ನಡುವೆ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ‌ ಸಿಎಂ ಕುಮಾರಸ್ವಾಮಿ ಕೂಡಾ ಮಾತನಾಡಿದ್ದು, ಸಂಪುಟ ವಿಸ್ತರಣೆ ಬಗ್ಗೆ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಸಂಪುಟ ವಿಸ್ತರಣೆಗೆ ರೆಡಿ ಇದ್ದೇವೆ. ಕಾಂಗ್ರೆಸ್‌ನವರು ತೀರ್ಮಾನ ಕೈಗೊಳ್ಳಬೇಕು ಅಷ್ಟೇ. ಸಂಪುಟ ‌ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ತೆರಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಿಂದ ಯಾವಾಗ ಸೂಚನೆ ಬರುತ್ತೋ, ಅವಾಗ ಪ್ರಮಾಣ‌ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಮಯ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಒಟ್ಟಾರೆ ಆಕಾಂಕ್ಷಿಗಳು‌ ಸ್ಥಾನಕ್ಕಾಗಿ ಕಾಯುತ್ತಿದ್ರೆ, ಮತ್ತೆ ಕೆಲವರು ಸಂಪುಟದಲ್ಲೇ ಉಳಿಯುವ ಕಸರತ್ತು ನಡೆಸಿದ್ದಾರೆ.

Leave a Reply