ಅಂತೂ ಇಂತೂ ವಿಸ್ತರಣೆಯಾಯ್ತು ಸಚಿವ ಸಂಪುಟ! ಮುಂದಿನ ಆಟ ಏನು?

ಡಿಜಿಟಲ್ ಕನ್ನಡ ಟೀಮ್:

ಅಂತೂ ಇಂತೂ ಅನೇಕ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ದೋಸ್ತಿ ಸರ್ಕಾರದ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಕೋಟಾ ಭರ್ತಿಯಾಗಿದೆ. ಅಲ್ಲಿಗೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಕಬ್ಬಿಣದ ಕಡಲೇಯಾಗಿದ್ದ ಸಮಸ್ಯೆ ಬಗೆಹರಿದಿದೆ. ಇನ್ನಾದರೂ ಕಾಂಗ್ರೆಸ್ ನಲ್ಲಿ ಭಿನ್ನ ರಾಗ ನಿಲ್ಲುತ್ತಾ? ಅಥವಾ ಹೊಸ ಆಟ ಪ್ರಾರಂಭವಾಗುತ್ತಾ? ಶೀಘ್ರದಲ್ಲೇ ಗೊತ್ತಾಗಲಿದೆ.

ಸಚಿವ ಸ್ಥಾನ ಸಿಗದೇ ಗುಟುರು ಹಾಕುತ್ತಿದ್ದ ಕೆಲವು ಹಿರಿಯ ನಾಯಕರು ಹಾಗೂ ಅವರ ಬೆಂಬಲಿಗರ ಮುಖದಲ್ಲಿ ಮಂದಹಾಸ ಮೂಡಿದೆ. ಜತೆಗೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎನ್ನುತ್ತಿದ್ದವರ ಬಾಯಿಗೆ ಬೀಗ ಬಿದ್ದಿದೆ. ಆದ್ರೆ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದ ಪರಿಣಾಮ, ಎಷ್ಟೇ ಪಟ್ಟು ಹಿಡಿದರು ತಮಗೆ ಮಂತ್ರಿ ಭಾಗ್ಯ ಸಿಗಲಿಲ್ಲವಲ್ಲ ಅಂತಾ ಇನ್ನು ಕೆಲವರು ಕೊರಗುತ್ತಿದ್ದಾರೆ.

ಶನಿವಾರ ರಾಜಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 8 ಕಾಂಗ್ರೆಸ್ ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಿಗೆ ಖಾತೆಯೂ ನಿಗದಿಯಾಗಿದ್ದು, ನೂತನ ಸಚಿವರು ಹಾಗೂ ಅವರಿಗೆ ನೀಡಲಾದ ಖಾತೆ ವಿವರ ಹೀಗಿದೆ…

  • ಎಂ.ಬಿ.ಪಾಟೀಲ್ – ಗೃಹ/ ಗ್ರಾಮೀಣಾಭಿವೃದ್ಧಿ
  • ಎಂ.ಟಿ.ಬಿ.ನಾಗರಾಜ್ – ನಗರಾಭಿವೃದ್ಧಿ ಖಾತೆ
  • ಸತೀಶ್ ಜಾರಕಿಹೊಳಿ – ಅರಣ್ಯ/ ಪೌರಾಡಳಿತ
  • ರಹೀಂಖಾನ್ – ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ
  • ಪರಮೇಶ್ವ ನಾಯ್ಕ್​​ – ಮೂಲಸೌಕರ್ಯ ಮತ್ತು ಕೌಶಲಾಭಿವೃದ್ಧಿ
  • ಆರ್.​ಬಿ.ತಿಮ್ಮಾಪುರ – ವೈದ್ಯಕೀಯ ಶಿಕ್ಷಣ
  • ತುಕಾರಾಂ – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದು, ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಬಬಲೇಶ್ವರ ವಿಧಾನಸಭೆಯ ಶಾಸಕ ಎಂ.ಬಿ.ಪಾಟೀಲ್ ಅವರು ದೇವರ ಹೆಸರಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕುಂದಕೋಳ ಕ್ಷೇತ್ರದ ಸಿ.ಎಸ್.ಶಿವಳ್ಳಿ, ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್, ಬೀದರ್ ಕ್ಷೇತ್ರದ ರಹೀಂ ಖಾನ್, ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್‌ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಾಗಿ ನೇಮಕಗೊಂಡವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿನಂದನೆ ಸಲ್ಲಿಸಿದರು.

Leave a Reply