ಮತ್ತೇ ಗರಿಗೆದರುತ್ತಿದೆ ತೃತೀಯ ರಂಗ ರಚನೆ ಕಸರತ್ತು? ಬಿಜೆಪಿಗೆ ವರವಾಗುತ್ತಾ ಕೆಸಿಆರ್ ಪ್ರಯತ್ನ?

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೆಡೆ ಮಹಾಘಟಬಂಧನದ ಕುರಿತು ಚರ್ಚೆ ಒಂದೆಡೆಯಾದರೆ, ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ರಚನೆಯ ಕಸರತ್ತು ಆರಂಭವಾಗಿದೆ. ಬಿಜೆಪಿಯನ್ನು ಒಟ್ಟಾಗಿ ಎದುರಿಸುವ ಚರ್ಚೆ ಸಂದರ್ಭದಲ್ಲಿ ಈ ಬೆಳವಣಿಗೆ ಬಿಜೆಪಿಗೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ.

ಹೌದು, ಇತ್ತೀಚೆಗೆ ನಡೆದ ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿದ ಕೆ.ಚಂದ್ರಶೇಖರ್ ರಾವ್ ಈ ತೃತೀಯ ರಂಗದ ಗಂಟೆ ಬಾರಿಸಲು ಆರಂಭಿಸಿದ್ದಾರೆ.

ಭಾನುವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಕೆಸಿಆರ್ ಇಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಅತ್ತ ಉತ್ತರ ಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುವ ಮಾತನಾಡುತ್ತಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಮಹಾಘಟಬಂಧನದ ಪ್ರಯತ್ನ ಬಿಜೆಪಿ ನಾಯಕರ ಹೇಳಿಕೆಯಂತೆ ಕಲ್ಪನೆಯಲ್ಲಿ ಉಳಿದುಬಿಡುತ್ತದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ.

ಈ ಮಧ್ಯೆ ಸೋಮವಾರ ಶಿವಸೇನೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದೆ. ಮಹಾಘಟಬಂಧನ ಸಾಧ್ಯವಾಗಿದ್ದೇ ಆದರೆ ಅದು ಯಾರ ನಾಯಕತ್ವದಲ್ಲಿ? ಎಂಬುದು ದೊಡ್ಡ ಪ್ರಶ್ನೆ.

ಮಹಾಘಟಬಂಧನದಲ್ಲಿ ಕೈ ಜೋಡಿಸುತ್ತಿರುವ ಎಲ್ಲಾ ಪಕ್ಷಗಳ ಮುಖಂಡರು ಅವಕಾಶ ಸಿಕ್ಕರೆ ತಾವೇ ಮುಂದಾಳತ್ವ ವಹಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿಕೊಳ್ಳುವ ಮನಸ್ಥಿತಿ ಇನ್ನು ಇತರೆ ವಿರೋಧ ಪಕ್ಷಗಳಿಗೆ ಬಂದಿಲ್ಲ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಒಟ್ಟಾದರೆ ಸಹಜವಾಗಿಯೇ ಬಿಜೆಪಿಗೆ ತೀವ್ರ ಪೈಪೋಟಿ ಎದುರಾಗುವುದರಲ್ಲಿ ಸಂಶಯವಿಲ್ಲ. ಆದರೆ ವಿರೋಧ ಪಕ್ಷಗಳ ಮಹಾಘಟಬಂಧನ ರಚನೆ ಇನ್ನು ಚರ್ಚೆ ಮತ್ತು ಹೇಳಿಕೆ ಮಟ್ಟದಲ್ಲೇ ಉಳಿದಿದ್ದು, ಅಂತಿಮ ಸ್ವರೂಪ ಪಡೆಯುವ ಮುನ್ನ ಈಗ ತೃತೀಯ ರಂಗದ ಚರ್ಚೆ ಆರಂಭವಾಗಿದೆ.

ಮಹಾಘಟಬಂಧನ ಹಾಗೂ ತೃತೀಯ ರಂಗದ ಗೊಂದಲ ಇತ್ಯರ್ಥವಾಗದೆ ವಿರೋಧ ಪಕ್ಷಗಳ ಒಗ್ಗಟ್ಟು ಮುರಿದು ಬಿದ್ದರೆ, ಇದು ಬಿಜೆಪಿಯ ಗೆಲುವಿಗೆ ಸುಲಭ ದಾರಿಯಾಗುವುದರಲ್ಲಿ ಅನುಮಾನವಿಲ್ಲ.

Leave a Reply