ಸರ್ವಿಕಲ್ ಎನ್ ಸರ್ಕಲೇಜ್ ಎಂದರೇನು? ಗರ್ಭಕಂಠಕ್ಕೆ ರಕ್ಷಣೆ ಹೊಲಿಗೆ ಅಗತ್ಯ ಯಾಕೆ?

ಡಾ.ಬಿ.ರಮೇಶ್

ಏನಿದು ಸರ್ವಿಕಲ್ ಸರ್ಕಲೇಜ್?
ಗರ್ಭಕಂಠ ದುರ್ಬಲಗೊಂಡಾಗ, ಗರ್ಭಕೋಶಕ್ಕೆ ಮಗುವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಕುಗ್ಗುತ್ತದೆ. ಆ ಕಾರಣದಿಂದ ತಡವಾಗಿ ಗರ್ಭಪಾತ (Late Miscarrage) ಅಥವಾ ‘ಅವಧಿಗೆ ಮುನ್ನ ಹೆರಿಗೆ’ (Preterm Birth) ಆಗಬಹುದು.

ಇದನ್ನು ಯಾವಾಗ ಮಾಡಬಹುದು?
1ಕ್ಕಿಂತ ಹೆಚ್ಚು ಸಲ ಗರ್ಭಪಾತ ಆಗಿರುವವರಿಗೆ ಪ್ರಸ್ತುತ ಗರ್ಭಾವಸ್ಥೆಯ 3 ತಿಂಗಳು ಪೂರ್ತಿಗೊಂಡಾಗ ಗರ್ಭಕಂಠಕ್ಕೆ ಹೊಲಿಗೆ ಹಾಕುವ ‘ಸರ್ಕಲೇಜ್’ ಪ್ರಕ್ರಿಯೆ ನೆರವೇರಿಸಲಾಗುತ್ತದೆ. ಹೊಟ್ಟೆ ಯೋನಿ ಭಾಗದಿಂದ ಅಥವಾ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಕಂಠಕ್ಕೆ ಬಲ ಕೊಡುವ ಈ ಪ್ರಕ್ರಿಯೆ ನೆರವೇರಿಸಲಾಗುತ್ತದೆ.

ಯಾರಿಗೆ ಇದು ಸೂಕ್ತ?
ಮಹಿಳೆ ಕೆಳಕಂಡ 1ಕ್ಕಿಂತ ಹೆಚ್ಚು ಅಪಾಯಕಾರಿ ಸನ್ನಿವೇಶಗಳನ್ನು ಹೊಂದಿದ್ದರೆ:

 • ಈ ಮುಂಚೆ ಅವಧಿಗೆ ಮುನ್ನ ಹೆರಿಗೆ ಆಗಿದ್ದರೆ
 • ಗರ್ಭಕಂಠಕ್ಕೆ ಶಸ್ತ್ರಚಿಕಿತ್ಸೆ ಆದವರಿಗೆ
 • ಗರ್ಭಕೋಶದ ಅಸಾಮಾನ್ಯ ಸ್ಥಿತಿ ಇರುವವರಿಗೆ
 • ಗರ್ಭಕಂಠದ ಉದ್ದ 25 ಮಿ.ಮೀ.ಗಿಂತ ಕಡಿಮೆ ಇದ್ದರೆ
 • ಪದೇ ಪದೇ ಗರ್ಭಪಾತ ಆಗುವವರಿಗೆ (Recurrent Miscarriage)

ಯಾವ ಯಾವ ವಿಧಾನಗಳಿವೆ?
ಗರ್ಭಕೋಶಕ್ಕೆ ಸುರಕ್ಷತೆ ನೀಡಲು 3 ಬಗೆಯ ಹೊಲಿಗೆ ಹಾಕಲಾಗುತ್ತದೆ. ಮೊದಲನೆಯದು, ಮ್ಯಾಕ್’ಡೋನಾಲ್ಠ್ ಸರ್ಕಲೇಜ್. ಈ ಪದ್ಧತಿಯಲ್ಲಿ ಯೋನಿ ಮಾರ್ಗದ ಮೂಲಕ ಗರ್ಭಕಂಠಕ್ಕೆ ಬ್ಯಾಂಡ್ ಹಾಕಿ ಕಟ್ಟಲಾಗುತ್ತದೆ. 16-18ನೇ ವಾರದ ಗರ್ಭಾವಸ್ಥೆಯಲ್ಲಿ ಈ ಪ್ರಕ್ರಿಯೆ ಮಾಡಲಾಗುತ್ತದೆ. 37ನೇ ವಾರದಲ್ಲಿ ಹೊಲಿಗೆ ತೆಗೆಯಲಾಗುತ್ತದೆ.
ಎರಡನೇ ಪದ್ಧತಿ: ಹೊಟ್ಟೆ ಕೊಯ್ದು ಮಾಡುವ ಈ ಪದ್ಧತಿ ಹೆಚ್ಚು ಪ್ರಚಲಿತವಾಗಿಲ್ಲ. ಒಂದು ಸಲ ಗರ್ಭಕಂಠಕ್ಕೆ ಹೊಲಿಗೆ ಹಾಕಿದರೆ ಮತ್ತೆ ಬಿಚ್ಚುವ ಅಗತ್ಯ ಇರುವುದಿಲ್ಲ. ಆದರೆ ಇಲ್ಲಿ ಸಹಜ ಹೆರಿಗೆ ಆಗುವ ಸಾಧ್ಯತೆ ಇಲ್ಲ. ಸಿಸೇರಿಯನ್ ಮಾಡಿಯೇ ಮಗುವನ್ನು ಹೊರಗೆ ತೆಗೆಯಬೇಕಾಗುತ್ತದೆ.

ಪೂರ್ವಸಿದ್ಧತೆ ಹೇಗೆ?
ಮಹಿಳೆ ಹಿಂದೆ ಗರ್ಭ ಧರಿಸಿದ, ಆಕೆಗೆ ಗರ್ಭಪಾತ ಆಗಿರುವ, ಅವಧಿಗೆ ಮುನ್ನ ಹೆರಿಗೆಯಾದ ಇತಿಹಾಸ ಕಂಡುಕೊಂಡ ಬಳಿಕ ಅಲ್ಟ್ರಾಸೌಂಡ್ ಯಂತ್ರದ ಮೂಲಕ ಗರ್ಭಕಂಠದ ಗಾತ್ರದ ಅಳತೆ ಮಾಡಲಾಗುತ್ತದೆ. ಈ ಚಿಕಿತ್ಸೆ ನೆರವೇರಿಸುವ  24 ಗಂಟೆ ಮುಂಚೆ ಯಾವುದೇ ಆಹಾರ, ಪಾನೀಯ ಸೇವಿಸಬಾರದೆಂದು ಸಲಹೆ ನೀಡಲಾಗುತ್ತದೆ. ಜತೆಗೆ ಸಮಾಗಮ ಚಟುವಟಿಕೆ ಕೂಡ ನಡೆಸಿರಬಾರದು.

ಲ್ಯಾಪ್ರೊಸ್ಕೋಪಿಕ್ ಸರ್ಕಲೇಜ್ ಹೇಗೆ?
ಮಹಿಳೆಗೆ ಜನರಲ್ ಅನಸ್ಥೇಶಿಯಾ ಕೊಟ್ಟು ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಹೊಲಿಗೆ ಹಾಕುವ ಈ ಪದ್ಧತಿ ಅನುಸರಿಸಲಾಗುತ್ತದೆ. ಎಲ್ಲಕ್ಕೂ ಮುಂಚೆ ಗರ್ಭಕೋಶದ ಮೇಲ್ಭಾಗದಲ್ಲಿರುವ ಮೂತ್ರಕೋಶವನ್ನು ಪ್ರತ್ಯೇಕಗೊಳಿಸಿ, ಗರ್ಭಕೋಶಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳವನ್ನು ಬದಿಗೆ ಸರಿಸಿ ಗರ್ಭಕಂಠಕ್ಕೆ ಹೊಲಿಗೆ ಹಾಕಿ ಗಟ್ಟಿಯಾಗಿ ಕಟ್ಟಲಾಗುತ್ತದೆ. ಲ್ಯಾಪ್ರೊಸ್ಕೋಪಿಕ್ ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿದ ವೈದ್ಯರಷ್ಟೇ ಈ ಚಿಕಿತ್ಸೆ ನೆರವೇರಿಸಲು ಸಾಧ್ಯ.

ಹೊಟ್ಟೆ ಕೊಯ್ದು ಅಥವಾ ಲ್ಯಾಪ್ರೋಸ್ಕೋಪಿ ಈ ಎರಡೂ ವಿಧಾನದಲ್ಲಿ ಗರ್ಭಕಂಠಕ್ಕೆ ಹೊಲಿಗೆ ಹಾಕುವ ಪ್ರಕ್ರಿಯೆ ನೆರವೇರಿಸಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಅಥವಾ ಅದಕ್ಕೂ ಮುಂಚೆ ಕೂಡ ಈ ಪ್ರಕ್ರಿಯೆ ನೆರವೇರಿಸಬಹುದು.

ಸರ್ಕಲೇಜ್ ಬಳಿಕ ಕಾಳಜಿ ಹೇಗೆ?
ನಂತರದ ಕಾಳಜಿಗೆ ಸೂಚನೆ: ಔಷಧಿ:

 • ವೈದ್ಯರು ಸೂಚಿಸಿದ ಔಷಧಿ ಮಾತ್ರೆ ತಪ್ಪದೇ ಸೇವಿಸಬೇಕು.
 • ಸೋಂಕು ಉಂಟಾಗದಿರಲು ಆಂಟಿಬಯಾಟಿಕ್ಸ್ ಕೊಡಲಾಗುತ್ತದೆ.

ಮಲಬದ್ಧತೆ:

 • ಯಾವುದೇ ಕಾರಣಕ್ಕೂ ಮಲಬದ್ಧತೆ ಉಂಟಾಗದಂತೆ ಎಚ್ಚರ ವಹಿಸಬೇಕು. ನಾರಿನಂಶ ಹೆಚ್ಚಿಗೆ ಇರುವ ಆಹಾರ ಸೇವಿಸಬೇಕು. ನಿಯಮಿತ ವ್ಯಾಯಾಮ ಆಹಾರ ಪಚನ ಕ್ರಿಯೆಗೆ ಪೂರಕ.

ವಿಶ್ರಾಂತಿ:

 • ಗರ್ಭಪಾತ ಹಾಗೂ ಅವಧಿಗೆ ಮುಂಚೆ ಹೆರಿಗೆ ಆಗದೇ ಇರಲು ಯಾವುದೇ ಕಷ್ಟಕರ ಕೆಲಸ ಮಾಡಬೇಡಿ.

ವೆಜೈನಲ್/ಗಾಯದ ಬಗ್ಗೆ ಕಾಳಜಿ :

 • ಸ್ನಾನ ಮಾಡುವಾಗ ಯೋನಿ ಹಾಗೂ ಗಾಯವನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಬ್ಯಾಂಡೇಜ್ ಕೊಳಕಾದಾಗ, ಒದ್ದೆಯಾದಾಗ ಅದನ್ನು ಬದಲಿಸಿ.

ತಕ್ಷಣ ವೈದ್ಯರ ಗಮನಕ್ಕೆ ತನ್ನಿ:

 • ಹಾಕಿರುವ ಬ್ಯಾಂಡೇಜು ರಕ್ತಮಯ ಆಗಿದ್ದರೆ
 • ಚರ್ಮದ ಮೇಲೆ ಗೀರಿದಂತಹ ಗೆರೆಗಳು(Rashes) ಉಂಟಾಗಿದ್ದರೆ.
 • ಯೋನಿಸ್ರಾವ ಉಂಟಾಗುತ್ತಿದ್ಧರೆ, ಅದು ದುರ್ವಾಸನೆಯಿಂದ ಕೂಡಿದ್ದರೆ.
 • ಕಿಬ್ಬೊಟ್ಟೆ ಅಥವಾ ಬೆನ್ನು ನೋವು ತೀವ್ರ ಅನಿಸುತ್ತಿದ್ದರೆ, ಹೆರಿಗೆ ಬೇನೆ ತರದ ನೋವು ಅನಿಸುತ್ತಿದ್ದರೆ.
 • ಮೂತ್ರ ಮಾಡಲು ಕಷ್ಟ ಎನಿಸುತ್ತಿದ್ದರೆ.
 • ಯೋನಿಯಿಂದ ರಕ್ತಸ್ರಾವ ಆಗುತ್ತಿದ್ದರೆ.

ಸರ್ಕಲೇಜ್’ನ ಯಶಸ್ಸಿನ ಪ್ರಮಾಣ:
ಇದನ್ನು ಯೋಜನಾಬದ್ಧ ರೀತಿಯಲ್ಲಿ ಮಾಡಿದರೆ ಇದರ ಯಶಸ್ಸಿನ ಪ್ರಮಾಣ 80-90% ಆಗಿರುತ್ತದೆ. ಇದನ್ನು ತುರ್ತುಸ್ಥಿತಿಯಲ್ಲಿ ಮಾಡಬೇಕಾದ ಸ್ಥಿತಿಯಲ್ಲಿ ಇದರ ಯಶಸ್ಸಿನ ಪ್ರಮಾಣ 40-60% ಆಗಿರುತ್ತದೆ.

ರಕ್ಷಣೆಗಾಗಿ ಸರ್ಕಲೇಜ್
ಗರ್ಭಕೋಶ ದುರ್ಬಲವಾಗಿದ್ದರೆ, ಗರ್ಭಕೋಶದ ಕಂಠ ತೆರೆದುಕೊಳ್ಳಲು ಶುರುವಾಗಿದ್ದರೆ, ಪೊರೆ ಕಳಚತೊಡಗಿದ್ದರೆ ಗರ್ಭಾವಸ್ಥೆಯ 4ನೇ ತಿಂಗಳ ಅವಧಿಯಲ್ಲಿ ‘ರೆಸ್ಕೂ ಸರ್ಕಲೇಜ್’ ಅಥವಾ ರಕ್ಷಣೆಗಾಗಿ ಗರ್ಭಕಂಠಕ್ಕೆ ಹೊಲಿಗೆ ಹಾಕುವ ಪ್ರಕ್ರಿಯೆ ನೆರವೇರಿಸಲಾಗುತ್ತದೆ. ಔಷಧಿಗಳು, ಆಂಟಿಬಯಾಟಿಕ್’ಗಳನ್ನು ಕೊಟ್ಟು ಹೆರಿಗೆ ನೋವನ್ನು ಕಡಿಮೆ ಮಾಡಲು ತುರ್ತುಸ್ಥಿತಿಯ ಹೊಲಿಗೆ ಹಾಕುವ ಪ್ರಕ್ರಿಯೆ ನೆರವೇರಿಸಲಾಗುತ್ತದೆ. ಇದರ ಯಶಸ್ಸಿನ ಪ್ರಮಾಣ 12.5 – 63%.

ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply