ಡಿಜಿಟಲ್ ಕನ್ನಡ ಟೀಮ್:
ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಹಾಗೂ ಗುರುವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಪಿಯೂಶ್ ಗೊಯೆಲ್, ಸುರೇಶ್ ಪ್ರಭು, ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಿರುವ ನೆರವನ್ನು ನೀಡುವಂತೆ ಕೋರಿದ್ದಾರೆ.
ಮೋದಿ ಅವರನ್ನು ಭೇಟಿಯಾಗಿ ನೀರಾವರಿ ಯೋಜನೆಗಳು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ, ಉದ್ಯೋಗ ಖಾತರಿ ಯೋಜನೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇನ್ನು ಮೇಕೆದಾಟು ವಿಚಾರವನ್ನು ಪ್ರಸ್ತಾಪಿಸಿ ತಮಿಳುನಾಡು ಅನಗತ್ಯವಾಗಿ ಕರ್ನಾಟಕ ಸರ್ಕಾರದ ಯೋಜನೆಗೆ ವಿರೋಧಿಸುತ್ತಿದೆ. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿದರು.
ಉಳಿದಂತೆ ಕೃಷ್ಣಾ ನ್ಯಾಯಾಧಿಕರಣ 2ರಡಿ ರಾಜ್ಯದ ನೀರಾವರಿ ಉದ್ದೇಶಕ್ಕೆ 166 ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆಯ ಅಧಿಸೂಚನೆ ಹೊರಡಿಸಿ, ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿರುವ ನೀರು ಬಳಸಿಕೊಳ್ಳಲು ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ.
ಇನ್ನು ಹಣಕಾಸು ಸಚಿವರನ್ನು ಭೇಟಿ ಮಾಡಿ ಜಿಎಸ್ಟಿ ಪರಿಹಾರ ಅವಧಿಯನ್ನು 2025ರ ವರೆಗೂ ವಿಸ್ತರಿಸುವಂತೆ ಮನವಿ ಮಾಡಿದರು. ಇನ್ನು ಕಲ್ಲಿದ್ದಲು ಸಚಿವ ಪಿಯೂಶ್ ಗೊಯೆಲ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉದ್ಭವಿಸಿರುವ ಕಲ್ಲಿದ್ದಲು ಕೊರತೆಗೆ ನೀಗಿಸಲು ಶೀಘ್ರ ಕಲ್ಲಿದ್ದಲು ಸರಬರಾಜು ಮಾಡುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.