ಉಮೇಶ್ ಕತ್ತಿಗೆ ಬಿಜೆಪಿ ಸರಕಾರದ ಭ್ರಮೆ ಇನ್ನೂ ಬಿಟ್ಟಿಲ್ವಾ..?!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ. ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ರಾಜೀನಾಮೆ ನೀಡುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿದೆ ಎಂದು ಹೇಳಲಾಗುತ್ತದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಹೇಳುತ್ತಿದ್ದರೂ ತಳ್ಳುತ್ತಾ ಅರ್ಧ ವರ್ಷ ಪೂರೈಸಿದೆ. ಆ ಬಳಿಕ ಸಚಿವ ಸಂಪುಟ ಪುನಾರಚನೆ ಆದ ಬಳಿಕ ಸರ್ಕಾರ ಬೀಳುತ್ತೆ, ಆಪರೇಷನ್ ಕಮಲ ನಡೆಯುತ್ತದೆ ಎಂದೇ ಹೇಳಲಾಗ್ತಿತ್ತು.‌ ಇದಕ್ಕೆ ಪೂರಕ ಎಂಬಂತೆ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಹಾಗೂ ಸಚಿವ ಸ್ಥಾನ ಸಿಗದೆ ಬೇಸರಗೊಂಡಿದ್ದ ಶಾಸಕರು ಮಾತನಾಡಿದ್ರು. ಆದ್ರೀಗ ಬಿಜೆಪಿ ಕಡೆಯಿಂದ ಅಂತಿಮ ಹಂತದ ಹೇಳಿಕೆ ಹೊರಬಿದ್ದಿದೆ. ಮುಂದಿನ 24 ಗಂಟೆಯೊಳಗೆ ಸರ್ಕಾರ ಬಿದ್ದೆ ಬೀಳುತ್ತದೆ ಎನ್ನುವ ಮಾತಿನಿಂದ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ಯಾ ಅನ್ನೋ ಆತಂಕ ಮೂಡುವಂತೆ ಮಾಡಿತು.

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ‌ ಶಾಸಕ ಉಮೇಶ್ ಕತ್ತಿ, ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಜೊತೆಗೆ 15 ಜನ ಶಾಸಕರು ಸಂಪರ್ಕದಲ್ಲಿದ್ದು ಮುಂದಿನ 24 ಗಂಟೆಯೊಳಗೆ ಸರ್ಕಾರ ಬೀಳುತ್ತದೆ. ಮುಂದಿನ ಒಂದು ವಾರದ ಒಳಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ‌ ಬರಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಕರೆದಿದ್ದ ಸಭೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ರಮೇಶ್ ಜಾರಕಿಹೊಳಿ ನಮ್ಮ ಆತ್ಮೀಯ ಮಿತ್ರರು. ಅವರ‌ ಜೊತೆಗೆ ಮಾತಾಡಿರಬಹುದು. ರಮೇಶ್ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಬಹಿರಂಗ ಸ್ವಾಗತ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಅಮಿತ್ ಶಾ ಭೇಟಿಯಾಗುವ ವಿಚಾರದಲ್ಲಿ ತಪ್ಪೇನಿದೆ ಎಂದಿರುವ ಕತ್ತಿ, ಹದಿನೈದು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸದ್ಯಕ್ಕೆ ಅವರ ಹೆಸರುಗಳನ್ನ ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ. ಇದರ ಬೆನ್ನಿಗೆ ಬಿಎಸ್‌ವೈ ಮಾತು ಅನುಮಾನಕ್ಕೆ ಕಾರಣವಾಗಿದೆ.

ಬಿಜೆಪಿ ಶಾಸಕ ಉಮೇಶ್ ಕತ್ತಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, 24 ಗಂಟೆಯಲ್ಲಿ ಸರ್ಕಾರ ಬೀಳದೇ ಹೋದ್ರೆ ಉಮೇಶ ಕತ್ತಿ ರಾಜೀನಾಮೆ ಕೊಟ್ಟು ಹೊರಬರಲಿ ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಉಮೇಶ್ ಕತ್ತಿ ಮಾತು ನಿಜವಾಗದಿದ್ದರೆ ತಾಕತ್ತಿದ್ದರೆ ರಾಜೀನಾಮೆ ನೀಡಲಿ. ಅದು ಬಿಟ್ಟು ಹುಚ್ಚುಹುಚ್ಚಾಗಿ ಈ ರೀತಿ ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ನಾನು ಬೆಳಗಾವಿಯಲ್ಲಿ ರಮೇಶ್ ಜಾತಕಿಹೊಳಿ ಸೇರಿದಂತೆ ಯಾರನ್ನೂ ಭೇಟಿ ಮಾಡುವುದಿಲ್ಲ. ಸದ್ಯಕ್ಕೆ ನಮ್ಮ ಜೊತೆ ಯಾರೂ ಸಂಪರ್ಕದಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ. ಉಮೇಶ ಕತ್ತಿ ಜತೆಗೆ ಎಲ್ಲರೂ ಸಂಪರ್ಕದಲ್ಲಿ ಇರುತ್ತಾರೆ‌. ಹೊಸ ಸರ್ಕಾರ ರಚನೆಯ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ಗೆ ತಿರುಗೇಟು ಕೊಟ್ಟಿರುವ ಉಮೇಶ್ ಕತ್ತಿ, ಉಮೇಶ್ ಕತ್ತಿ ಸಣ್ಣ ಹುಡುಗ ಅಲ್ಲ. ಈಗಾಗಲೇ 10 ಜನ ಶಾಸಕರು ರಾಜೀನಾಮೆ ಕೊಡಲು ಸಿದ್ದರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಳುವುದು ಪಕ್ಕಾ ಆಗಿದೆ. ಒಂದು ವಾರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಸರ್ಕಾರ ರಚನೆಯಾದ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ? ಎಂದು ಮರು ಸವಾಲು ಹಾಕಿದರು. ಸಮಯ ಬಂದಾಗ ನಮ್ಮ ತಾಕತ್ತು ತೋರಿಸ್ತಿವಿ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕುತಿದ್ಯ ಅನುಮಾನ ಮೂಡುವಂತೆ ಮಾಡಿರೋದು ಮಾತ್ರ ಸುಳ್ಳಲ್ಲ.

Leave a Reply