ಕಾಂಗರೂಗಳ ಕಾಲು ಮುರಿದ ಟೀಂ ಇಂಡಿಯಾ ಬೌಲರ್ಸ್!

ಡಿಜಿಟಲ್ ಕನ್ನಡ ಟೀಮ್:

ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಈ ಮಟ್ಟದಲ್ಲಿ ಪ್ರಾಬಲ್ಯ ಮೆರೆಯುತ್ತದೆ ಎಂದು ಯಾರಾದರೂ ಊಹಿಸಿದ್ದರೆ? ಖಂಡಿತವಾಗಿಯೂ ಇಲ್ಲ. ಕಳೆದೆರಡು ಪ್ರವಾಸದಲ್ಲಿನ ಟೆಸ್ಟ್ ಸರಣಿ ವೇಳೆ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾ ಈ ಬಾರಿ ವೈಟ್ ವಾಷ್ ನಿಂದ ತಪ್ಪಿಸಿಕೊಂಡರೆ ಸಾಕು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟ ಭದ್ರವಾಗಲಿದೆ. ಇದನ್ನು ಮಾಡಿಕೊಂಡರೆ ಸಾಕು ಅದೇ ಟೀಂ ಇಂಡಿಯಾದ ಯಶಸ್ಸು ಎಂದು ಭಾವಿಸಲಾಗಿತ್ತು.

ಆದರೆ…

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಎಲ್ಲರ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಸದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಂಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 151 ರನ್ ಗಳಿಗೆ ಆಲೌಟ್ ಮಾಡಿರುವುದು ಎಲ್ಲರ ಹುಬ್ಬೇರಿಸುವಂತಹ ಪ್ರದರ್ಶನವಾಗಿದೆ. ಪಂದ್ಯದಲ್ಲಿ 293 ರನ್ ಗಳ ಇನಿಂಗ್ಸ್ ಮುನ್ನಡೆ ಪಡೆದಿದ್ದರೂ ಟೀಂ ಇಂಡಿಯಾ ಆಸ್ಟ್ರೇಲಿಯಾದ ಮೇಲೆ ಫಾಲೋ ಆನ್ ಹಾಕದೇ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸದೆ. ಇದರ ಹಿಂದೆ ವಿರಾಟ್ ಕೊಹ್ಲಿಯ ತಂತ್ರಗಾರಿಕೆ ಇದೆ.

ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಆರಂಭಿಸಿರುವುದರಿಂದ ಬೌಲರ್ ಮತ್ತು ಫೀಲ್ಡರ್ ಗಳಿಗೆ ಮತ್ತಷ್ಟು ವಿಶ್ರಾಂತಿ ಸಿಗಲಿದೆ. ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್ ನಲ್ಲಿ ಆಕ್ರಮಣಕಾರಿ ದಾಳಿ ಸಂಘಟಿಸಲು ಇದು ನೆರವಾಗಲಿದೆ. ಇನ್ನು ಪಿಚ್ ನಾಲ್ಕನೆ ದಿನದ ಅಂತಿಮ ಸೆಷನ್ ಹಾಗೂ ಐದನೇ ದಿನಕ್ಕೆ ಹೋದಂತೆ ಸ್ಪಿನ್ನರ್ ಗಳಿಗೆ ಪಿಚ್ ಇನ್ನು ಹೆಚ್ಚಿನ ಸಾಥ್ ನೀಡಲಿದೆ. ಹೀಗಾಗಿ ಆ ಸಂದರ್ಭದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ನಾಥನ್ ಲಯಾನ್ ಅವರನ್ನು ಎದುರಿಸುವುದಕ್ಕಿಂತ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ಗಳನ್ನು ಎದುರಿಸುವಂತೆ ಮಾಡುವುದು ಕೊಹ್ಲಿಗೆ ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ಆಸೀಸ್ ಗೆ ಫಾಲೋ ಆನ್ ನೀಡಿ ನಂತರ ಆತಿಥೇಯರು ರಕ್ಷಣಾತ್ಮಕ ಆಟಕ್ಕೆ ಮುಂದಾದರೆ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಬಹುದು. ಹೀಗಾಗಿ ಪಂದ್ಯದ ನಾಲ್ಕನೇ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡುವಂತೆ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ.

ಪಂದ್ಯದ ಮೂರೂ ದಿನಗಳ ಆಟದಲ್ಲಿ ಆತಿಥೇಯರು ಒಂದೇ ಒಂದು ಸೆಷನ್ ಕೂಡ ಭಾರತ ತಂಡದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ ಟೀಂ ಇಂಡಿಯಾ ಕಾಂಗರೂಗಳ ಮೇಲೆ ನಿಯಂತ್ರಣ ಸಾಧಿಸಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ (33ಕ್ಕೆ6) ಮಾರಕ ದಾಳಿ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನೆಲದಲ್ಲಿ 5 ವಿಕೆಟ್ ಗೊಂಚಲುಗಳನ್ನು ಕಿತ್ತಿದ್ದ ಬುಮ್ರಾ ಆಸ್ಟ್ರೇಲಿಯಾದಲ್ಲೂ ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ. ಸದ್ಯ ಬಾಕ್ಸಿಂಗ್ ಡೇ ಪಂದ್ಯ ಟೀಂ ಇಂಡಿಯಾದ ಬಿಗಿ ಹಿಡಿತದಲ್ಲಿದ್ದು, ಆಸ್ಟ್ರೇಲಿಯಾಗೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Leave a Reply