ಕುಮಾರಸ್ವಾಮಿಗೆ ಕಾಂಗ್ರೆಸ್ ಮುಖಂಡರೇ ಕಂಟಕ; ಹೊರಟ್ಟಿ ಸಂಕಟ ನುಡಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಆದ್ರೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್‌ನವರು ಅವರದ್ದೇ ಸರ್ಕಾರದ ಇದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಕಾಂಗ್ರೆಸ್‌ನವರಿಗೆ ಗೌರವ ಇಲ್ಲ.. ಕಾಂಗ್ರೆಸ್‌ನವರ ವರ್ತನೆ ನೋಡಿ ನೋಡಿ ನಮ್ಮ ವರಿಷ್ಠರು ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ನಾಯಕರ ವರ್ತನೆ ಹೀಗೆ ಮುಂದುವರಿದರೆ ಮೈತ್ರಿ ಸರ್ಕಾರ ಯಾಕೆ ಬೇಕು? ಈ ಮೈತ್ರಿ ಸರ್ಕಾರವನ್ನು ಯಾಕೆ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರೆ ಹೆಚ್ಚು ನಿಗಮ ಮಂಡಳಿ ಪಡೆದಿದ್ದಾರೆ. ಸಿದ್ದರಾಮಯ್ಯನವರಿಗೆ ಈ ಮೈತ್ರಿ ಸರ್ಕಾರ ನಡೆಸಬಾರದು ಎನ್ನುವ ಉದ್ದೇಶ ಇರಬಹುದು. ಸಿಎಂ ಕುಮಾರಸ್ವಾಮಿ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಅವರಿಗೆ ಅಧಿಕಾರ ನಡೆಸಲು ಕಾಂಗ್ರೆಸ್‌ನವರು ಬಿಡ್ತಿಲ್ಲ. ಕಾಂಗ್ರೆಸ್‌ನವರಿಗೆ ಮೈತ್ರಿ ಸರ್ಕಾರ ನಡೆಸಲು ಮನಸ್ಸಿಲ್ಲ ಎಂದ ಮೇಲೆ ಈ ಸರ್ಕಾರ ಯಾಕೆ ನಡೆಸಬೇಕು. ಸರ್ಕಾರ ನಡೆಸುವುದಾದರೆ ಒಪ್ಪಂದ ಮಾಡಿಕೊಂಡ ರೀತಿಯಲ್ಲಿ ಸರ್ಕಾರ ನಡೆಸಬೇಕು ಇಲ್ಲವಾದ್ರೆ ಸರ್ಕಾರ ನಡೆಸುವ ಅಗತ್ಯವಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

ಕಾಂಗ್ರೆಸ್‌ನವರಿಗೆ ಅಧಿಕಾರದಲ್ಲಿ ಇಲ್ಲದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲನೆ ಒದ್ದಾಡುತ್ತಾರೆ.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ..? ಸಮ್ಮಿಶ್ರ ಸರ್ಕಾರ ಇದೆಯೋ ಅನ್ನುವ ಪರಿಸ್ಥಿತಿಯಿದೆ. ಕಾಂಗ್ರೆಸ್‌ನವರು ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಸಭಾಪತಿ ಚುನಾವಣೆಯಲ್ಲೂ ತಮಗೇ ಬೇಕು ಎಂದು ಹಠ ಹಿಡಿದರು. ಸೌಜನ್ಯಕ್ಕಾದರೂ ನಮ್ಮ‌ ಜೊತೆ ಮಾತುಕತೆ ನಡೆಸಿಲ್ಲ. ನಿಗಮ ಮಂಡಳಿ ನೇಮಕಾತಿಯಲ್ಲೂ‌ ಸಿಎಂ ಕುಮಾರಸ್ವಾಮಿಯವರನ್ನು ಕೇಳದೆ ತೀರ್ಮಾನ ಮಾಡಿದ್ದಾರೆ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳಿವೆ.

ಸಿದ್ದರಾಮಯ್ಯರಿಗೆ ಎಸ್.ಆರ್ ಪಾಟೀಲ್‌ರನ್ನು ಸಭಾಪತಿ ಮಾಡಲು‌‌ ಕೂಡ ಆಗಲಿಲ್ಲ‌. ಸರ್ಕಾರದಲ್ಲಿ ಸ್ಪಷ್ಟನೆ ಇಲ್ಲದಿದ್ದರೆ ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ.
ಕುಮಾರಸ್ವಾಮಿಯವರು ಹೆಬ್ಬೆಟ್ಟಿನ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ನಾಯಕರ ಒಳಜಗಳದಿಂದ ಕುಮಾರಸ್ವಾಮಿಯವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ನವರ ಈಗಿನ ನಡೆ ನೋಡಿದ್ರೆ ಲೋಕಸಭೆಯಲ್ಲಿ ಹೊಂದಾಣಿಕೆ ಆಗುವುದು ಕಷ್ಟ ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಾರೆ ಮೈತ್ರಿ ಪಕ್ಷ ಕಾಂಗ್ರೆಸ್ ಹಾಗೂ ಕೈ ನಾಯಕರ ವಿರುದ್ಧ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ನಾಯಕರು ಸರ್ಕಾರ ನಡಸಲು ಸುಸ್ತಾಗಿದ್ದಾರೆ‌ ಅನ್ನೋದು ಗೊತ್ತಾಗುತ್ತದೆ. ಇದು ಎಲ್ಲಿಗೆ ಹೋಗಿ ಮುಟ್ಟುವುದೋ ಕಾದು ನೋಡಬೇಕು.

Leave a Reply