ಲೋಕಾಯುಕ್ತದಲ್ಲಿ ಖಡಕ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ನಿಧನ, ನಾಳೆ ಅಂತ್ಯಕ್ರಿಯೆ

  ಡಿಜಿಟಲ್ ಕನ್ನಡ ಟೀಮ್:

  ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್  ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ಕೆ. ಮಧುಕರ್ ಶೆಟ್ಟಿ (47) ಶುಕ್ರವಾರ ವಿಧಿವಶರಾಗಿದ್ದಾರೆ. ಎಚ್1ಎನ್1ನಿಂದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಮಧುಕರ್ ಅವರು ಹೈದರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಮಧ್ಯಾಹ್ನ ಮಧುಕರ್ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.

  ಕಳೆದ ಕೆಲವು ದಿನಗಳ ಹಿಂದೆ ಅವರಿಗೆ ಹೃದಯ, ಶ್ವಾಸಕೋಶ ಆಪರೇಷನ್ ನಡೆಸಲಾಗಿದ್ದು ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿದ್ದ ಮಧುಕರ್ ಶೆಟ್ಟಿ ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದರು. ಆದರೆ ಮತ್ತೆ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರ ಹೃದಯ ಸಮಸ್ಯೆ ಹೆಚ್ಚಾಯಿತು. ಅಂಗಗಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದ ಕಾರಣ ಮೃತಪಟ್ಟಿದ್ದಾರೆ.

  ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ 2ನೇ ಪುತ್ರ ಡಾ. ಮಧುಕರ್ ಶೆಟ್ಟಿ. ಕುಂದಾಪುರ ತಾಲೂಕಿನ ವಡ್ಡರ್ಸೆಯಲ್ಲಿ ಜನನ, ಬೆಂಗಳೂರು-ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಮುಗಿಸಿದ ಮಧುಕರ್ ಶೆಟ್ಟಿ ಅವರು 1999ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ನಕ್ಸಲ್ ನಿಗ್ರಹ ಪಡೆ ಎಸ್​ಪಿಯಾಗಿ, ಚಿಕ್ಕಮಗಳೂರು ಜಿಲ್ಲೆ ಎಸ್​ಪಿಯಾಗಿ ಕಾರ್ಯನಿರ್ವಹಿಸಿ, ನಂತರ ಲೋಕಾಯುಕ್ತ ಎಸ್​ಪಿ ಆಗಿದ್ದರು. ಈ ಅವಧಿಯಲ್ಲಿ ಅವರ ಕಾರ್ಯವೈಖರಿ ಎಲ್ಲರ ಮನಗೆದ್ದಿತ್ತು. ಲೋಕಾಯುಕ್ತದಲ್ಲಿದ್ದಾಗ ಕೋಲಾರ ಮತ್ತು ಚಾಮರಾಜನಗರ ಎಸ್​ಪಿಗಳು ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡ್ ಆಗಿ ಬಂಧಿಸಿ ಜೈಲಿಗೆ ಕಳಿಸಿದ್ದರು.

  ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ ಅವರು ತಾರತಮ್ಯ ನೀತಿ ಅನುಸರಿಸುತ್ತಾರೆ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿ 2011ರಲ್ಲಿ ಉನ್ನತ ವ್ಯಾಸಂಗದ ರಜೆ ಮೇಲೆ ತೆರಳಿದ್ದರು. 5 ವರ್ಷಗಳ ಕಾಲ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ರಾಜ್ಯಕ್ಕೆ ಮರಳಿ ಮೈಸೂರಿನ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಡಿಐಜಿಯಾಗಿ ಬಡ್ತಿ ಪಡೆದ ಅವರು ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೇಮಕಗೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಮಧುಕರ ಶೆಟ್ಟಿ ಹೈದರಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

  Leave a Reply