ಡಿಜಿಟಲ್ ಕನ್ನಡ ಟೀಮ್:
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್ಲ್ಯಾಡ್ ಹೆಲಿಕಾಪ್ಟರ್ ಹಗರಣ ಕಾಂಗ್ರೆಸ್ಗೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಕಾಂಗ್ರೆಸ್ಗೆ ಸಂಕಷ್ಟ ತಂದೊಡ್ಡ ಬಹುದಾದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಶಂಕಿತ ಆರೋಪಿ, ವಿಚಾರಣೆ ವೇಳೆ ‘ಶ್ರೀಮತಿ ಗಾಂಧಿ’ ಹಾಗೂ ‘ಇಟಲಿ ಮಹಿಳೆಯ ಪುತ್ರ’ನ ಹೆಸರನ್ನು ಪ್ರಸ್ತಾಪಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ವಕೀಲರು ಶನಿವಾರ ದೆಹಲಿ ಕೋರ್ಟ್ಗೆ ತಿಳಿಸಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಕುರಿತ ವಿಚಾರಣೆ ವೇಳೆ ‘ಇಟಲಿ ಮಹಿಳೆಯ ಪುತ್ರ ಹಾಗೂ ದೇಶದ ಮುಂದಿನ ಪ್ರಧಾನಿ’ ಎಂಬ ಹೆಸರನ್ನು ಕ್ರಿಶ್ಚಿಯನ್ ಮಿಷೆಲ್ ಹೇಳಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಜತೆಗೆ ಆರೋಪಿಗೆ ಹೊರಗಿನಿಂದ ನಿರ್ದೇಶನ ನೀಡಲಾಗುತ್ತಿದೆ. ಹೀಗಾಗಿ ವಕೀಲರು ಆತನನ್ನು ಭೇಟಿ ಮಾಡದಂತೆ ನಿಷೇಧಿಸಬೇಕು ಹಾಗೂ ಈತನ ವಿಚಾರಣೆಗೆ ಇನ್ನು ಹೆಚ್ಚಿನ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಪುರಸ್ಕರಿಸಿದ ಕೋರ್ಟ್ 7 ದಿನಗಳ ವಿಚಾರಣೆ ಅವಧಿ ವಿಸ್ತರಣೆ ಮಾಡಿದ್ದು, ಆರೋಪಿಯನ್ನು ವಕೀಲರು ಬೆಳಗ್ಗೆ ಹಾಗೂ ಸಂಜೆ ಕೇವಲ 15 ನಿಮಿಷ ಮಾತ್ರ ಭೇಟಿಯಾಗಬೇಕು ಎಂದು ನಿರ್ದೇಶನ ನೀಡಿದೆ.
ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ದೊಡ್ಡ ಹಗರಣದ ಪ್ರಮುಖ ದಲ್ಲಾಳಿಯನ್ನು ಗಡಿಪಾರು ಮಾಡಿಸುವಲ್ಲಿ ಮೋದಿ ಸರ್ಕಾರದ ಯಶಸ್ವಿಯಾಗಿ ವಿಚಾರಣೆ ನಡೆಸುತ್ತಿದೆ.
ಈಗ ಬಂಧಿತನಾಗಿರುವ ಪ್ರಮುಖ ಶಂಕಿತ ಆರೋಪಿ ಕ್ರಿಶ್ಚಿಯನ್ ಮಿಷೆಲ್, ಇಟಲಿ ಮಹಿಳೆಯ ಪುತ್ರ, ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೆಲ್ಲಾ ಹೇಳಿರುವುದು ರಾಹುಲ್ ಗಾಂಧಿ ಮೇಲೆ ಶಂಕೆ ವ್ಯಕ್ತವಾಗುವಂತೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ರಫೇಲ್ ಡೀಲ್ ಅನ್ನು ಬಿಜೆಪಿ ಎದುರು ದಾಳಿ ಮಾಡಲು ಅಸ್ತ್ರ ಮಾಡಿಕೊಂಡಿದ್ದ ರಾಹುಲ್ ಗಾಂಧಿ ಬಾಯಿ ಮುಚ್ಚಿಸಲು ವಿವಿಐಪಿ ಹೆಲಿಕಾಪ್ಟರ್ ಸ್ಕ್ಯಾಮ್ ಬಿಜೆಪಿಗೆ ರಾಮಬಾಣವಾಗಿ ಪರಿಣಮಿಸಿದೆ.