ಹಿರಿಯ ನಟ ಲೋಕನಾಥ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಶಂಕರ್​ನಾಗ್​ ನಿರ್ದೇಶಿಸಿದ್ದ ಮಿಂಚಿನ ಓಟ ಸಿನಿಮಾದಲ್ಲಿ ‘ಅಂಕಲ್​’ ಪಾತ್ರ ಮಾಡಿ ಖ್ಯಾತಿ ಪಡೆದಿದ್ದ ಲೋಕನಾಥ್​ ಅವರು ಇಂದು ವಿಧಿವಶರಾಗಿದ್ದಾರೆ.

ಡಾ.ರಾಜ್ ಕುಮಾರ್ ಅವರಿಂದ ಇತ್ತೀಚಿನ ನಾಯಕ ನಟರುಗಳ ಜತೆ ಅಭಿನಯಿಸಿದ್ದ ‘ಅಂಕಲ್’ ಇಹಲೋಕ ತ್ಯಜಿಸಿದ್ದಾರೆ.

‘ಬಣ್ಣ ಹಚ್ಚಿಕೊಂಡು ಅಭಿನಯಿಸುತ್ತಿರುವಾಗಲೇ ನನ್ನ ಪ್ರಾಣ ಹೋಗಬೇಕೆಂಬುದು ನನ್ನ ದೊಡ್ಡ ಆಸೆ’ ಎಂದಿದ್ದ ಮೇರುನಟ ಲೋಕನಾಥ್​.

90 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುಟ್ಟಣ್ಣ ಕಣಗಾಲ್​ ಅವರ ನಾಗರಹಾವು ಚಿತ್ರದಲ್ಲಿ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ ಹೆಚ್ಚು ಪ್ರಸಿದ್ಧರಾಗಿದ್ದ ಲೋಕನಾಥ್​ ಅಭಿಮಾನಿಗಳ ಮನಗೆದ್ದಿದ್ದರು. ಮಿಂಚಿನ ಓಟ ಸಿನಿಮಾದಲ್ಲಿ ಶಂಕರ್​ನಾಗ್​ ಹಾಗೂ ಅನಂತ್​ನಾಗ್​ ಜೊತೆಗೆ ಜೈಲಿನಲ್ಲಿ ಬಂಧಿಯಾದ ಕಳ್ಳನ ಪಾತ್ರ ಮಾಡಿದ್ದ ಲೋಕನಾಥ್​ ವಿಭಿನ್ನ ಪಾತ್ರಗಳಿಗೂ ಸೈ ಎಂದಿದ್ದರು.

ರಂಗಭೂಮಿಯಲ್ಲೂ ಹೆಚ್ಚು ಗುರುತಿಸಿಕೊಂಡಿದ್ದ ಲೋಕನಾಥ್​ ಅವರು ಬಿ.ವಿ. ಕಾರಂತ, ಪ್ರಸನ್ನ ಮುಂತಾದ ಮಹಾನ್ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿದ್ದರು.

ತಮ್ಮ ನಟನಾ ಜೀವನದಲ್ಲಿ 1 ಸಾವಿರಕ್ಕೂ ಹೆಚ್ಚು ನಾಟಕಗಳು, 650 ಸಿನಿಮಾಗಳಲ್ಲಿ ನಟಿಸಿರುವ ಲೋಕನಾಥ್​ ಶಂಕರ್​ನಾಗ್​ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದವರು. ಶಂಕರ್​ನಾಗ್​ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್​ ಕಿರುತೆರೆ ಸರಣಿಯಲ್ಲಿ ಅಭಿನಯಿಸಿದ್ದ ಲೋಕನಾಥ್​ ನಂತರವೂ ಅನೇಕ ಧಾರಾವಾಹಿಗಳಲ್ಲಿ ಅಭಿಯಿಸಿದರು. ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ಗೆಜ್ಜೆಪೂಜೆ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಲೋಕನಾಥ್​ ನಂತರ ಹಿಂತಿರುಗಿ ನೋಡಲೇ ಇಲ್ಲ.

ಶಂಕರ್​ನಾಗ್​, ಅನಂತ್​ನಾಗ್​, ವಿಷ್ಣುವರ್ಧನ್, ರಮೇಶ್​ ಅರವಿಂದ್, ಅಂಬರೀಷ್, ಜಗ್ಗೇಶ್, ಲೋಕೇಶ್​, ಡಾ. ರಾಜ್​ಕುಮಾರ್​, ದ್ವಾರಕೀಶ್​ ರಿಂದ ಇತ್ತೀಚಿನ ನಟರವರ ಜತೆಗೂ ಅಭಿನಯಿಸಿದ್ದರು. ಅದರೊಂದಿಗೆ ಸುಮಾರು ಮೂರು ತಲೆಮಾರಿನ ನಟರೊಂದಿಗೆ ಅಭಿನಯಿಸಿದ ಖ್ಯಾತಿ ಪಡೆದಿದ್ದರು.

Leave a Reply