ಕಾಂಗ್ರೆಸ್ ವಿರುದ್ಧ ದೊಡ್ಡ ಗೌಡರ ಗುಡುಗು..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೊದಲ ಬಾರಿಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಮೃದು ದನಿಯಲ್ಲೇ ಚಾಟಿ ಬೀಸಿದ್ದಾರೆ.

ಚುನಾವಣಾ ಫಲಿತಾಂಶ ಹೊರಬಂದಾಗ ಯಾವುದೇ ಷರತ್ತು ಇಲ್ಲ ಬೇಷರತ್ ಬೆಂಬಲ ನೀಡುತ್ತೇವೆ ಎಂದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ರು. ಆ ಬಳಿಕ ನಿಧಾನವಾಗಿ ಕಾಂಗ್ರೆಸ್‌ನವರು ಷರತ್ತು ವಿಧಿಸಿಕೊಂಡು ಬಂದರು. ಕಳೆದ ಬಾರಿ ಜೆಡಿಎಸ್ ಬಿಜೆಪಿ ಜೊತೆ ಸರಕಾರ ರಚನೆ ಮಾಡಿದ್ದಾಗ ಸಮನಾಗಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದರು. ಆದ್ರೆ ಕಾಂಗ್ರೆಸ್‌ನವರು ಮಾತ್ರ ಮೂರನೇ ಒಂದು ಭಾಗ ಎನ್ನುತ್ತಿದ್ದಾರೆ. ಸಚಿವ ಸ್ಥಾನ ಹಂಚಿಕೆಯಲ್ಲೂ ಹಾಗೆ ಮಾಡಿದ್ರು. ನಿಗಮ ಮಂಡಳಿಯಲ್ಲೂ ಜೆಡಿಎಸ್‌ಗೆ ಸಮನಾದ ಅಧಿಕಾರ ಹಂಚಿಕೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲೂ ಸೀಟು ಹಂಚಿಕೆ ಗೊಂದಲವಿದ್ದು ಮೂರನೇ ಒಂದು ಸ್ಥಾನ ಜೆಡಿಎಸ್‌ಗೆ ಸಿಗಬಹುದು. ಆದರೆ ನಮಗೆ 10 ರಿಂದ 11 ಸ್ಥಾನಗಳು ಸಿಗಬಹುದು. ಸೀಟು ಹಂಚಿಕೆ ವಿಚಾರದಲ್ಲಿ ಜಗಳ ತೆಗೆಯೋ ಅವಶ್ಯಕತೆ ಇಲ್ಲ. ನಾವು ಕೂಡ ಕಾಂಗ್ರೆಸ್‌ಗೆ ಸಹಕರಿಸುತ್ತಿದ್ದೇವೆ. ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಸೀಟು ಹಂಚಿಕೆ ಸ್ಷಷ್ಟವಾಗಲಿದೆ. ಇಂತಹದ್ದೇ ಕ್ಷೇತ್ರಗಳು ಬೇಕು ಅನ್ನೋ ಬೇಡಿಕೆಯನ್ನು ನಾವು ಇಟ್ಟಿಲ್ಲ ಎಂದಿರುವ ಅವರು ಜೆಡಿಎಸ್‌ಗೆ ಹತ್ತರಿಂದ ಹನ್ನೆರಡು ಸೀಟುಗಳು ಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಇನ್ನು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದಿರುವ ಸಿದ್ದರಾಮಯ್ಯ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಹೆಚ್.ಡಿ ದೇವೇಗೌಡ ಅವರು, ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷ ವಿಚಾರ ಸತ್ಯ. ಬಿಜೆಪಿ ನಾಯಕರಿಗೆ ಸರ್ಕಾರ ಬೀಳಿಸಬೇಕು ಎಂಬ ಬಯಕೆ ಇದೆ. ಅದನ್ನೇ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಆದರೆ ಬಿಜೆಪಿ ಯೋಜನೆ ಫಲ ಕೊಡುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಐದು ವರ್ಷ ರಾಜ್ಯ ಆಳಿದವರು ಅವರು, ಜವಾಬ್ದಾರಿಯಿಂದಲೇ ಮಾತನಾಡಿದ್ದಾರೆ. ಶಾಸಕರಿಗೆ ಆಮಿಷ ನೀಡುತ್ತಿರುವ ಬಗ್ಗೆ ಸಿದ್ದರಾಮಯ್ಯರಿಗೆ ಮಾಹಿತಿ ಇದ್ದೆ ಹೇಳಿರುತ್ತಾರೆ ಎಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ವಿರುದ್ಧ ಒಳ್ಳೇ ಮಾತುಗಳಲ್ಲಿ ಚಾಟಿ ಬೀಸಿರೋದು ಮೈತ್ರಿ ಬಗ್ಗೆ ಗೌಡರಿಗೆ ಅಸಮಾಧಾನ ಉಂಟಾಗಿದೆ ಅನ್ನೋದನ್ನು ಸಾರುತ್ತಿದೆ.

Leave a Reply