ಮೋದಿ ವಿರುದ್ಧ ತಿರುಗಿ ಬಿತ್ತಾ ಆರ್‌ಎಸ್‌ಎಸ್..?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಎದುರು ಸಾಮಾನ್ಯವಾಗಿ ಮಾತನಾಡಲ್ಲ. ಕೆಲವೊಮ್ಮೆ ದೊಡ್ಡ ದೊಡ್ಡ ವಿವಾದಗಳಾದಾಗಲೂ ಮೋದಿ ಮೌನಕ್ಕೆ ಶರಣಾಗುತ್ತಾರೆ. ಭದ್ರತೆಯ ಸಮಸ್ಯೆಯಿಂದಲೂ ಮಾಧ್ಯಮಗಳಿಂದ ದೂರ ಉಳಿದಿರಬಹುದು ಅಥವಾ ನಾನು ಸಂಸತ್‌ನಲ್ಲಿ ಹೇಳಬೇಕಿರೋದನ್ನು ಹೇಳುತ್ತೇನೆ. ಮಾಧ್ಯಮಗಳಲ್ಲಿ ಮಾತನಾಡಿದ್ರೆ ಸುಖಾಸುಮ್ಮನೆ ವಿವಾದ ಆಗಲಿದೆ ಕಾರಣಕ್ಕೆ ಅಂತರ ಕಾಯ್ದುಕೊಂಡಿರಬಹುದು. ಆದರೆ ನಿನ್ನೆ ಜನವರಿ 1ರಂದು ಹೊಸ ವರ್ಷ ಆಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನ್ಯೂಸ್ ಏಜೆನ್ಸಿ ಆಗಿರುವ ಏಷಿಯನ್ ನ್ಯೂಸ್ ಇಂಟರ್‌ನ್ಯಾಷನಲ್ (ANI)ಗೆ ಸಂದರ್ಶನ ಕೊಟ್ಟಿದ್ದಾರೆ. ಅದರಲ್ಲಿ ಹಂಚಿಕೊಂಡಿರುವ ಮಾಹಿತಿ ಆರ್‌ಎಸ್‌ಎಸ್ ಕಣ್ಣು ಕೆಂಪಾಗಿಸಿದೆ.

ಸಂದರ್ಶನದಲ್ಲಿ ಪ್ರಮುಖವಾಗಿ ಮೋದಿ ಅವರನ್ನು ಕೇಳಲಾಗಿದ್ದು, ರಾಮಮಂದಿರ ನಿರ್ಮಾಣ ಯಾವಾಗ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಮಮಂದಿರ ವಿವಾದ ದೀರ್ಘ ಕಾಲದಿಂದಲೂ ಕೋರ್ಟ್‌ನಲ್ಲಿದೆ. 60 ವರ್ಷ ದೇಶ ಆಳಿದ ಕಾಂಗ್ರೆಸ್​ ಕೂಡ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ವಿವಾದ ಬಗೆ ಹರಿಸಲು ಬಿಡ್ತಿಲ್ಲ. ಕಾಂಗ್ರೆಸ್ ವಕೀಲರು ಕೋರ್ಟ್‌ನಲ್ಲಿ ವಿಚಾರಣೆಗೆ ಅಡ್ಡಿಯಾಗ್ತಿದೆ. ಕೋರ್ಟ್​ನಲ್ಲಿ ಅಡ್ಡಗಾಲು ಹಾಕುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ರಾಮಮಂದಿರದ ಬಗ್ಗೆ ಬಿಜೆಪಿ ಧೋರಣೆ ಸ್ಪಷ್ಟವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ರಾಮಮಂದಿರ ನಿರ್ಮಾಣದ ಬಗ್ಗೆ ಸರ್ಕಾರದ ಕೆಲಸ ಆರಂಭವಾಗುತ್ತೆ. ಸದ್ಯಕ್ಕೆ ರಾಮಂದಿರ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆ ದೇಶದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ಮಹಾಘಟಬಂಧನ್ ಶಕ್ತಿಯುತವಾಗ್ತಿದೆ ಎಂದಿರುವ ಪ್ರಶ್ನೆಗೆ ಮೋದಿ ತುಂಬಾ ಸರಳವಾಗಿ ಉತ್ತರ ಕೊಟ್ಟಿದ್ದು, ಮುಂದಿನ ಲೋಕಸಭಾ ಚುನಾವಣೆ ದೇಶದ ಜನತೆ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯಲಿದ್ದು, ನಮ್ಮ ಸರ್ಕಾರದ ಕಾರ್ಯಕ್ರಮ ಹಿಡಿದು ಜನರ ಮುಂದೆ ಹೋಗಿ ಮತ ಕೇಳ್ತೀವಿ. ಬಿಜೆಪಿ ವಿರುದ್ಧ ರಚನೆ ಆಗಿರುವ ಮಹಾಘಟಬಂಧನ್​ಗೆ ದೂರದೃಷ್ಟಿ ಇಲ್ಲ. ಬಿಜೆಪಿ ಸಾಮಾನ್ಯ ಜನರ ಮೇಲೆ ವಿಶ್ವಾಸ ಇಡುತ್ತೆ. ನಮ್ಮ ಸರ್ಕಾರದಿಂದ ದೂರವಾಗಲು ಜನತೆಗೆ ಕಾರಣಗಳೇ ಇಲ್ಲ. ದೇಶದ ಯುವಜನತೆಯ ಮೇಲೆ ನಮಗೆ ವಿಶ್ವಾಸವಿದೆ. ನಮ್ಮ ಪರವಾಗಿ ದೇಶದ ಜನರು ಇರುತ್ತಾರೆ ಎಂಬ ದೃಢ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಹಾಘಟಬಂಧನ್ ಏಕೈಕ ಉದ್ದೇಶ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಇಳಿಸುವುದೇ ಆಗಿದೆ. ಕೆಲವು ರಾಜಕೀಯ ಪಂಡಿತರು ಕೂಡ ಈ ಬಾರಿ ಮೋದಿ ಸರ್ಕಾರ ನಿರೀಕ್ಷಿಸಿದಷ್ಟು ಸ್ಥಾನಗಳು ಬರುವುದಿಲ್ಲ ಎಂದಿದ್ದಾರೆ. ಆದ್ರೆ ಎಲ್ಲವನ್ನು ಮೀರಿ ನಾನು ಜಯಗಳಿಸುತ್ತೇವೆ ಎಂದಿದ್ದಾರೆ.

ಇನ್ನು ಪಂಚರಾಜ್ಯಗಳಲ್ಲಿ ಎದುರಾದ ಸೋಲು ನಿಮ್ಮ ಆತ್ಮವಿಶ್ವಾಸ ಕಡಿಮೆ ಮಾಡಿದ್ಯಾ ಅನ್ನೋ ಪ್ರಶ್ನೆಯನ್ನು ಮೋದಿ ಸಮರ್ಥವಾಗಿ ಎದುರಿಸಿದ್ದು, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ನಾವು ಕೂಡ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇನ್ನು ಉಳಿದ ಮೂರು ರಾಜ್ಯಗಳಲ್ಲಿ ಛತ್ತೀಸ್​ಗಢದಲ್ಲಿ ಒಂದು ಕಡೆ ಮಾತ್ರ ಪೂರ್ಣ ಬಹುಮತ ಬಂದಿದ್ದು, ಅಲ್ಲಿ ಭಾರತೀಯ ಜನತಾ ಪಾರ್ಟಿ ಸೋಲು ಕಂಡಿದೆ. ಇನ್ನುಳಿದಂತೆ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಹೊರಹೊಮ್ಮಿದೆ. 15 ವರ್ಷಗಳ ನಿರಂತರ ಅಧಿಕಾರದಿಂ ಅಧಿಕಾರ ವಿರೋಧಿ ಅಲೆ ನಮ್ಮ ಗೆಲುವಿಗೆ ಅಡ್ಡಿಯಾಗಿದೆಬೆಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಪ್ರಸಾರ ಆಗ್ತಿದ್ದ ಹಾಗೆ ಬಿಜೆಪಿ ಮಾತೃ ಸಂಸ್ಥೆ ಆರ್​ಎಸ್​ಎಸ್​ ಕೆಂಡಾಮಂಡಲವಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡ್ತೇವೆ ಎಂದು 1989ರಲ್ಲಿಯೇ ಸಂಕಲ್ಪ ಮಾಡಿತ್ತು. 2014ರ ಲೋಕಸಭಾ ಚುನಾವಣೆ ವೇಳೆಯಲ್ಲೂ ಬಿಜೆಪಿ ರಾಮಮಂದಿರ ನಿರ್ಮಾಣದ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿಯೇ ಭರವಸೆ ನೀಡಿತ್ತು. ಇದೇ ಕಾರಣಕ್ಕೆ ದೇಶದ ಜನರು ಬಹುಮತ ಕೊಟ್ಟು ಅಧಿಕಾರ ನಡೆಸಲು ಅನುವು ಮಾಡಿಕೊಟ್ಟಿದ್ದರು.. ಜನರ ಭರವಸೆಯನ್ನು ಹುಸಿ ಮಾಡದೆ ಇದೇ ಅವಧಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡ್ಬೇಕು. ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಅಂತಾ ಟ್ವೀಟ್ ಮಾಡುವ ಮೂಲಕ ಆರ್‌ಎಸ್‌ಎಸ್ ಒತ್ತಾಯ ಮಾಡಿದೆ. ಮೋದಿ ಹೇಳಿಕೆ ಬೆನ್ನಲ್ಲೇ ಆರ್‌ಎಸ್‌ಎಸ್‌ನಿಂದ ಹೊರಬಿದ್ದಿರುವ ಹೇಳಿಕೆ ಮೋದಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ಇದೀಗ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಆದ್ರೆ ಮೋದಿ ಮೌನಕ್ಕೆ ಶರಣಾಗುವ ಮೂಲಕ ವಿವಾದಕ್ಕೆ ಎಳ್ಳುನೀರು ಬಿಟ್ಟರೂ ಅಚ್ಚರಿಯಿಲ್ಲ.

Leave a Reply