ಯಶ್, ಸುದೀಪ್, ಪುನೀತ್ ಮನೆ ಮೇಲೆ ರೈಡ್! ಚಂದನವನದಲ್ಲಿ IT ದಾಳಿ ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಬೆಳ್ಳಬೆಳಗ್ಗೆ ಐಟಿ ಅಧಿಕಾರಿಗಳ ತಂಡ ಸ್ಯಾಂಡಲ್‌ವುಡ್‌ಗೆ ಶಾಕ್ ಕೊಟ್ಟಿದೆ. ಸುಮಾರು ಇನ್ನೂರು‌ ಮಂದಿ‌ ಅಧಿಕಾರಿಗಳ ತಂಡ ನಗರದ ವಿವಿಧ ಭಾಗದಲ್ಲಿರುವ ನಟ, ನಿರ್ಮಾಪಕರು, ವಿತರಕರ ಮನೆ ಮೇಲೆ ದಾಳಿ‌ ಮಾಡಿ ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ 2 ಖಾಸಗಿ ವಾಹನಗಳಲ್ಲಿ ಆಗಮಿಸಿದ 8 ಜನ ಆಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆದಾಯಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಪುನೀತ್ ಮನೆಗೆ ಮೂವರು ಚಿನ್ನಾಭರಣ ಪರಿಶೋಧಕರನ್ನು ಐಟಿ ಅಧಿಕಾರಿಗಳು ಮನೆಗೆ ಕರಡಸಿಕೊಂಡಿದ್ದಾರ. ಚಿನ್ನಾಭರಣ ತೂಕ ಮಾಡುವ ತಕ್ಕಡಿಗಳ ಜೊತೆಗೆ ಪುನೀತ್ ಮನೆಗೆ ಆಗಮಿಸಿದ್ದಾರೆ.

ಇನ್ನು ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮಹಾಲಕ್ಷ್ಮಿ ಲೇಔಟ್‌ನ ನಾಗಪುರ ನಿವಾಸದ ಮೇಲೆ ಐಟಿ ರೇಡ್ ನಡೆದಿದ್ದು, ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಪತ್ರದ ದಾಖಲೆಗಳು, ಆಡಿಟಿಂಗ್ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾಕ್‌ಲೈನ್ ನಿವಾಸದಲ್ಲಿ 2 ಕೆ.ಜಿ. ಯಷ್ಟು ಚಿನ್ನಾಭರಣ ಪತ್ತೆಯಾಗಿದ್ದು, 20 ಕೆ.ಜಿಗೂ ಹೆಚ್ಚು ಬೆಳ್ಳಿಯ ಸಾಮಗ್ರಿಗಳಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ ನೆಲಮಂಗಲ, ದೇವನಹಳ್ಳಿ, ಪೀಣ್ಯ ಬಳಿ ಎಕರೆಗಟ್ಟಲೆ ಜಾಗದ ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿವೆ ಎನ್ನಲಾಗಿದೆ. ನಟಸಾರ್ವಭೌಮ ಬಿಗ್ ಬಜೆಟ್ ಸಿನಿಮಾಕ್ಕೆ ಹಣ ಬಂದಿದ್ದೆಲ್ಲಿಂದ ಅನ್ನೋದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಹುಕೋಟಿ ಆದಾಯ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಾಗರಬಾವಿಯ ಮನೆ ಮೇಲೂ ದಾಳಿ ನಡೆಸಿ ಮಹತ್ವದ ಆಸ್ತಿ ಪತ್ರಗಳನ್ನು ಕಲೆ ಹಾಕಿದ್ದಾರೆ. ಬಳಿಕ ವಿಜಯ್ ಕಿರಗಂದೂರು ಅವರನ್ನು ಅಧಿಕಾರಿಗಳು ಖಾಸಗಿ ಕಾರಿನಲ್ಲೇ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಕೆಜಿಎಫ್‌ನ ರಾಕಿ ಭಾಯ್ ಯಶ್ ಮನೆ ಮೇಲೂ ದಾಳಿ ನಡೆದಿದೆ.

ಇನ್ನು 2018 ರಲ್ಲಿ ಅಬ್ಬರಿಸಿದ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ಅತ್ತ ವಿಲನ್ ಚಿತ್ರದ ನಟ ಶಿವರಾಜ್ ಕುಮಾರ್ ಅವರ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ನಿವಾಸದಲ್ಲೂ ಐಟಿ ಅಧಿಕಾರಿಗಳು ತಲಾಶ್ ನಡೆಸಿದ್ದಾರೆ. ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ನಿವಾಸಕ್ಕೂ ಲಗ್ಗೆ ಹಾಕಿರುವ ಐಟಿ ಅಧಿಕಾರಿಗಳ ತಂಡ ಆಯವ್ಯಯಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಅಧ್ಯಯನ ನಡೆಸುತ್ತಿದ್ದಾರೆ.

ಬೆಂಗಳೂರು ಪೊಲೀಸರಿಗೆ ಮೊದಲೇ ಮಾಹಿತಿ ಕೊಟ್ಟರೆ ದಾಳಿ ನಿಷ್ಪ್ರಯೋಜಕ ಆಗುವ ಭೀತಿಯಲ್ಲಿ ಕೇವಲ ಅರ್ಧ ಗಂಟೆ ಮುಂಚಿತವಾಗಿ ಮಾಹಿತಿ‌ ಕೊಟ್ಟು ಏಕಕಾಲದಲ್ಲಿ ಎಲ್ಲಾ ಕಡೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಾ ಅಧಿಕಾರಿಗಳು ಹೊರ ರಾಜ್ಯದವರಾಗಿದ್ದು, ಎಲ್ಲರೂ ಖಾಸಗಿ ವಾಹನಗಳಲ್ಲೇ ಆಗಮಿಸಲು ಯೋಜನೆ ರೂಪಿಸಿರೋದು ಅಧಿಕಾರಿಗಳ ಚಾಣಕ್ಯತನಕ್ಕೆ ಸಾಕ್ಷಿಯಾಗಿದೆ. ಇನ್ನು ಮನೆ ಕೆಲಸದವರನ್ನು ಒಳಗೆ ಬಿಡದ ಪೋಲೀಸರು, ಡ್ರೈವರ್ ಅನ್ನು ಹೊರಗೆ ಕಳುಹಿಸಿದ ಐಟಿ ಅಧಿಕಾರಿಗಳು ಕಟ್ಟುನಿಟ್ಟಾಗಿ ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಚಿತ್ರರಂಗ ಬಹುದೊಡ್ಡ ಸಿನಿಮಾ ಮಾರ್ಕೆಟ್ ಆಗಿಲ್ಲದಿದ್ರೂ ಕಳೆದ ವರ್ಷ ಸಾಕಷ್ಟು ಸಿಮಿಮಾಗಳು ಕೋಟಿ ಕೋಟಿ ಲೆಕ್ಕದಲ್ಲಿ ಆದಾಯ ಗಳಿಸಿವೆ. ಆದ್ರೆ ನಿರ್ಮಾಪಕರು, ವಿತರಕರು ಸೇರಿದಂತೆ ಸ್ಟಾರ್ ನಟರು ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿ‌ಕೊಟ್ಟಿರುವ ಸಾಧ್ಯತೆಗಳು‌ ಕಡಿಮೆ. ಪಾರದರ್ಶಕ ವ್ಯವಹಾರದ ದಾಖಲೆ ನೀಡದೆ ಸಿನಿಮಾ ಮಾಡಿಕೊಂಡು ತೆರಿಗರ ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೇ ಕಾರಣದಿಂದ ಸಿನಿಮಾ ಕ್ಷೇತ್ರದ ನಿರ್ಮಾಪಕ, ವಿತರಕ, ನಟ ಸೇರಿದಂತೆ ಉದ್ಯಮದಲ್ಲಿರುವ ಸಾಕಷ್ಟು ಜನರ ಮನೆಯ ಮೇಲೆ ಐಟಿ‌ಅಧಿಕಾರಿಗಳ ಕೆಂಗಣ್ಣು ಬಿದ್ದಿದೆ ಎಂದೇ ಹೇಳಬಹುದು.

Leave a Reply