ಮೋದಿ‌ ಸಂದರ್ಶನ ಮೊದಲೇ ಬರೆದಿದ್ದಾ..?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ‌ ಹೊಸ ವರ್ಷದ ದಿನ ನ್ಯೂಸ್ ಏಜೆನ್ಸಿ ANI ಗೆ ಸಂದರ್ಶನ ನೀಡಿರೋದು ಎಲ್ಲಾ ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪ್ರಧಾನಿ ಮೋದಿ‌ ಮಾತನಾಡಿರುವ ಮಾತುಗಳು ಎಲ್ಲಾ ಮುದ್ರಣ ಮಾಧ್ಯಮ ಡಿಜಿಟಲ್ ಮಾಧ್ಯಮದಲ್ಲೂ ಸದ್ದು ಮಾಡಿದೆ. ರಾಮ ಮಂದಿರ ನಿರ್ಮಾಣ, ಪಂಚ ರಾಜ್ಯದ ಸೋಲು, ರೈತರ ಸಾಲಮನ್ನಾ ಯೋಜನೆ ಸಾಧಕ ಬಾಧಕ, ಕಾಂಗ್ರೆಸ್ ಗಿಮಿಕ್ ರಾಜಕಾರಣ, ನೋಟ್ ನಿಷೇಧ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸ್ಮಿತಾ ಪ್ರಕಾಶ್ ಅವರು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ‌ ನಿರರ್ಗಳವಾಗಿ ಒಂದೊಂದೇ ಅಂಶಗಳನ್ನು ಆಯ್ದುಕೊಂಡು ಉತ್ತರ ನೀಡುತ್ತಾ ಸಾಗುತ್ತಾರೆ. ಮಧ್ಯೆ ಎಲ್ಲಿಯೂ ಪ್ರಶ್ನೆ ಎದುರಾಗುವುದಿಲ್ಲ. ಮೋದಿ ಮಾತು ಕೂಡ ಎಲ್ಲಿಯೂ ನಿಲ್ಲುವುದಿಲ್ಲ. ಹೀಗೆ ಸಾಗಿರುವ ಹೊಸ ವರ್ಷದ ಮೊದಲ ಸಂದರ್ಶನ ಜನರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಟ್ವಿಟ್ಟರ್‌ನಲ್ಲಿ ಸಂದರ್ಶನಕ್ಕೆ ಟೀಕೆ

ಟ್ವಿಟ್ಟರ್‌ನಲ್ಲಿ ಮೋದಿ ಸಂದರ್ಶನ ಕುರಿತು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಟ್ವಿಟಿಗರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮಿತಾ ಪ್ರಕಾಶ್ ಅವರದ್ದು ಒಳ್ಳೆಯ ಪಾರ್ಟನರ್‌ಶಿಪ್. ಸಚಿನ್ – ಸೆಹ್ವಾಗ್, ಗಂಗೂಲಿ – ದ್ರಾವಿಡ್ ಅವರನ್ನು ಮೀರಿಸುತ್ತಾರೆ ಎಂದು ಟೀಕಿಸಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಬರೆದು ಕೊಟ್ಟ ಸ್ಕ್ರಿಪ್ಟ್‌ಗೆ ANI ನವರು ಪ್ರಶ್ನೆಗಳನ್ನು ಬರೆದುಕೊಂಡು ಶೂಟ್ ಮಾಡಿದ್ದಾರೆ ಎಂದು ಕಿಚಾಯಿಸಿದ್ದಾರೆ. ಇನ್ನು ಚಾಣಕ್ಯ, ಚಂದ್ರಗುಪ್ತ ಮೌರ್ಯ, ಅಶೋಕ ಎಲ್ಲರೂ ಒಟ್ಟಿಗೆ ಸೇರಿದರೆ ಮೋದಿಗೆ ಸಮ ಎಂದಿರುವ ಟ್ವಿಟಿಗರು, ಎಲ್ಲ ಹೀರೋಗಳ ಒಟ್ಟು ಪ್ಯಾಕೇಜ್ ಮೋದಿ ಎಂದು ಉಬ್ಬೇರಿಸಿದ್ದಾರೆ. ಇಂಟರ್ ವ್ಯೂ ಮಾಡೋದು ಹೇಗೆ ಅನ್ನೋದನ್ನು ರಾಜ್‌ದೀಪ್ ಸರ್‌ದೇಸಾಯಿ ಅವರು ಸೋನಿಯಾ ಗಾಂಧಿ ಸಂದರ್ಶನ ಮಾಡಿದನ್ನು ಒಮ್ಮೆ ನೋಡಿ ಎಂದು ಸ್ಮಿತಾ ಪ್ರಕಾಶ್ ಅವರ ಕಾಲೆಳೆದಿದ್ದಾರೆ. ಪ್ರಶ್ನೆಗಳನ್ನು ಕೇಳಿದರೂ ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ರೀತಿಯಲ್ಲೇ ಉತ್ತರ ಕೊಟ್ಟರು ಎಂದಿದ್ದಾನೆ ಮತ್ತೊಬ್ಬ ಟ್ವಿಟಿಗ. ಹೀಗೆ ಟ್ವಿಟ್ಟರ್‌ನಲ್ಲಿ ಮೋದಿ ಸಂದರ್ಶನಕ್ಕೆ ಟೀಕೆಗಳ ಸುರಿಮಳೆಯೇ ಸುರಿದಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಪರವಾಗಿಯೂ ಕೆಲವರು ಬ್ಯಾಟ್ ಬೀಸಿದ್ದಾರೆ.

ಮೋದಿ ವಿರುದ್ಧ ಯಾಕೆ ವೀಕ್ಷಕನ ಕೋಪ?

ಜನರು ಇದೀಗ ತುಂಬಾ ಪ್ರಬುದ್ಧರಾಗಿದ್ದಾರೆ. ಯಾರೋ ಒಬ್ಬರು ಏನನ್ನಾದರೂ ಹೇಳುತ್ತಿದ್ದಾರೆ ಎಂದರೆ ಸುಮ್ಮನೆ ಕೇಳಿಸಿಕೊಂಡು ತಲೆಯಾಡಿಸುವ ಕಾಲ ಕಳೆದುಹೋಗಿದೆ. ಮಾತಿನ ಅರ್ಥ ಗ್ರಹಿಸಿ ಅಲ್ಲೇ ಎದುರು ಉತ್ತರ ಕೊಡುವಷ್ಟು ಬುದ್ಧಿವಂತ ಆಗಿದ್ದಾನೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಕೊಡುವುದೇ ಅಪರೂಪ. ಅಂತಹ ಪರಿಸ್ಥಿತಿಯಲ್ಲಿ ಮೋದಿ ಇಂಟರ್ ವ್ಯೂ ಅನ್ನು ಸಾಕಷ್ಟು ಆಯಾಮಗಳಲ್ಲಿ ಗ್ರಹಿಸುತ್ತಾನೆ. 1 ಗಂಟೆ 15 ನಿಮಿಷ ಕಾಲದ ಈ ಸಂದರ್ಶನದಲ್ಲಿ, ಮೋದಿ ಹೇಳಿದ ಒಂದೊಂದು ಮಾತನ್ನು ಪರಾಮರ್ಶೆ ಮಾಡುತ್ತಾನೆ ಈ ದೇಶದ ಪ್ರಜೆ. ಆ ಸಂದರ್ಶನದಲ್ಲಿ ಪ್ರಶ್ನೆ ಕೇಳೋದಷ್ಟೆ ಪತ್ರಕರ್ತನ ಕೆಲಸ, ಆ ಬಳಿಕ ಏನಿದ್ದರೂ ಉತ್ತರ ಕೊಡೋದು ಮೋದಿ ಕೆಲಸ ಅನ್ನೋ ರೀತಿ ಸಂದರ್ಶನ ಸಾಗಿದೆ. ಒಂದೇ ಒಂದು ಕ್ಷಣದಲ್ಲೂ ಮೋದಿ ಮಾತಿಗೆ ಅಡ್ಡಿ ಮಾಡಿ ತಿರುವು ಮುರುವು ಪ್ರಶ್ನೆ ಎದುರಾಗಲಿಲ್ಲ. ಭಾಷಣ ರೀತಿ ನೋಡುಗನಿಗೆ ಬಾಸವಾಗಿದ್ದು, ಕಿಡಿಕಾರಲು ಕಾರಣವಾಗಿದೆ. ಇದೇ ರೀತಿ ಮೋದಿ ಹಿಂದೊಮ್ಮೆ ಬಾಹ್ಯಾಕಾಶ ಕೇಂದ್ರದಲ್ಲಿ ಇಂಗ್ಲೀಷ್‌ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಎಲ್ಲರು ಹುಬ್ಬೇರುವಂತೆ ಮಾಡಿದ್ರು. ಆ ಬಳಿಕ ಅದು ಟೆಲಿಪ್ರಾಮ್ಟರ್ ಬಳಸಿ ಹಿಂದಿ ಬರವಣಿಗೆಯನ್ನು ಇಂಗ್ಲೀಷ್‌ನಲ್ಲಿ ಮಾತನಾಡಿದ್ರು ಅನ್ನೋ ಮಾಹಿತಿ ಹೊರಬಿದ್ದಿತ್ತು. ಅಮೆರಿಕದಲ್ಲೂ ಪ್ರಧಾನಿ ಮೋದಿ ಇದೇ ಕೈಚಳಕ ಬಳಸಿದ್ರು. ಹಾಗಾಗಿ ಮೋದಿ ಏನನ್ನು ಬೇಕಾದರೂ ಮಾಡ್ತಾರೆ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕಾಗಿ ಮೋದಿ ಬರೆದುಕೊಟ್ಟ ಉತ್ತರಕ್ಕೆ ಪ್ರಶ್ನೆ ಬರೆದುಕೊಂಡಿದ್ದಾರೆ ಎನ್ನಲಾಗ್ತಿದೆ.

Leave a Reply