ನ್ಯಾಯ ಸಿಗುವ ವಿಶ್ವಾಸವಿದೆ: ಐಟಿ ವಿಚಾರಣೆ ನಂತರ ಸಚಿವ ಡಿಕೆಶಿ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್:

ನಾನು ನ್ಯಾಯ ಬದ್ಧವಾಗಿ ದುಡಿದು ಸಂಪಾದಿಸಿದ್ದೇನೆ. ಎಲ್ಲ ಹಂತದಲ್ಲೂ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ. ಕಾನೂನಿನ ಮೇಲೆ ನನಗೆ ಗೌರವವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಐಟಿ ವಿಚಾರಣೆ ನಂತರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಹಾಗೂ ತಮ್ಮ ತಾಯಿಯನ್ನು ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಆರು ಗಂಟೆಗಳ ಕಾಲ ನನ್ನ ವಯಸ್ಸಾದ ತಾಯಿಯನ್ನು 6 ಗಂಟೆಗಳ ಕೂರಿಸಿ ವಿಚಾರಣೆ ಮಾಡಿದ್ದು ಬಹಳ ನೋವು ತಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ತಾಯಿ, ನಾನು ಮನೆಯಲ್ಲಿ ಇಲ್ಲದ ಕಾರಣ ಐಟಿ ಅಧಿಕಾರಿಗಳು ನಮ್ಮ ಮನೆಗೆ ಹೋಗಿ ನೋಟೀಸ್ ಅಂಟಿಸಿ ಬಂದಿದ್ದರು. ನೋಟೀಸ್‌ಗೆ ಗೌರವ ನೀಡುವ ಉದ್ದೇಶದಿಂದ ನಮ್ಮ ತಾಯಿಯನ್ನು ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದೆ. ನನ್ನ ತಾಯಿಗೆ 80 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ನೆರವಾಗಲು ನನಗೂ ಅವಕಾಶ ನೀಡಿದರು. ಐಟಿ ಅಧಿಕಾರಿಗಳು ನಮ್ಮೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ. ನಾನು ಆರೋಪಿ ಸ್ಥಾನದಲ್ಲಿದ್ದೇನೆ, ನಾನು ಐಟಿ ಬಗ್ಗೆ ಈಗ ಆರೋಪಿಸಲಾರೆ’ ಎಂದು ವಿವರಿಸಿದರು.

ವಿಧಾನಸಭೆ ಚುನಾವಣೆ ವೇಳೆಯೂ ದಾಳಿಯಾಗಿತ್ತು. ಇದೀಗ ಲೋಕಸಭೆ ಚುನಾವಣೆ ವೇಳೆ ಮತ್ತೇ ದಾಳಿ ಶುರುವಾಗಿದೆ ಅನ್ನೋ ಪ್ರಶ್ನೆಗೆ ನಾನೇನೂ ಹೇಳಲಾರೆ. ಹಿಂದೆ ‘ಆಸ್ಪತ್ರೆಯಿಂದ ಬಂದ ಸಮಯದಲ್ಲೇ ಏನು ಉತ್ತರ ಕೊಡಬೇಕಿತ್ತೋ ಅದನ್ನು ಕೊಟ್ಟಿದ್ದೇನೆ. ನಾನು ಈಗ ಆ ಬಗ್ಗೆ ಏನೂ ಹೇಳಲ್ಲ. ಇದರ ಹೊರತಾಗಿಯೂ ನನಗೆ ಬೇರೆ ಬೇರೆ ನೊಟೀಸ್ ಬಂದಿದೆ. ನಾನು ಅದನ್ನೆಲ್ಲ ಇಲ್ಲಿ ಹೇಳಲಿಕ್ಕೆ ಆಗಲ್ಲ. ಕಾನೂನಿನಲ್ಲಿ ಇದೆಲ್ಲ ನಡೆಯುತ್ತೆ.’

ಪುನೀತ್ ರಾಜಕುಮಾರ್ ಮನೆ ಮೇಲೆ ಐಟಿ ದಾಳಿ ಬಗ್ಗೆ ಮಾತನಾಡಿದ ಅವರು, ‘ಪುನೀತ್ ನಮ್ಮ ಪಕ್ಕದ ಮನೆಯವರು. ಬೆಳಿಗ್ಗೆ ಎದ್ದ ತಕ್ಷಣ ಅವರ ಮುಖ ನೋಡಬೇಕು. ಐಟಿ ದಾಳಿ ಮುಗಿತೇನೋ ಅಂತಾ ನೋಡೋಣ, ಮಾತಾಡೋಣ ಅಂತಾ ಹೋಗಿದ್ದೆ. ಇನ್ನೂ ನಡೀತಿದೆ ಅಂತಾ ಹೇಳಿದ್ರು. ಹೀಗಾಗಿ ವಾಪಸ್ ಬಂದೆ’ ಎಂದರು

Leave a Reply