ಸ್ಟಾರ್ ನಟರ ಮೇಲಿನ ಐಟಿ ದಾಳಿಗೆ ಇದೇ ಕಾರಣನಾ?

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಸುದೀಪ್, ಶಿವಣ್ಣ, ಯಶ್, ಪುನೀತ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡನೇ ದಾಳಿ ಮಾಡಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಶುರುವಾಗಿರುವ ಆದಾಯ ತೆರಿಗೆ ಅಧಿಕಾರಿಗಳ ಲೆಕ್ಕಾಚಾರ ಇನ್ನು ಕೂಡ ಮುಂದುವರಿದಿದೆ. ಕಳೆದ ವರ್ಷ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಸಾಕಷ್ಟು ಹಣ ಗಳಿಸಿತ್ತು. ಈ ಚಿತ್ರದಲ್ಲಿ ಅಭಿನಯಿಸಿದ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಮನೆ ಹಾಗೂ ನಿರ್ಮಾಪಕ ಸಿ.ಆರ್ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನು ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಹೀರೋ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ನಿರೀಕ್ಷೆ ಹುಟ್ಟಿಸಿರುವ ನಟಸಾರ್ವಭೌಮ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅವರ ಮನೆ ಮೇಲೂ ದಾಳಿಯಾಗಿದೆ. ಮೂರು ಟಾಪ್ ಮೋಸ್ಟ್ ಚಿತ್ರಗಳ ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಆದ್ರೆ ಐಟಿ ಅಧಿಕಾರಿಗಳ ದಾಳಿ ಒಂದು ವಾರದಲ್ಲಿ ಫಿಕ್ಸ್ ಆಗುವಂತಹ ಯೋಜನೆಯಲ್ಲ. ಕನಿಷ್ಟ ಆರು ತಿಂಗಳು, ಒಂದು ವರ್ಷ, ಎರಡು ವರ್ಷಗಳ ಕಾಲ ದಾಳಿ ನಡೆಸಬೇಕಿರುವ ವ್ಯಕ್ತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ದ ಮಾಡಿಕೊಳ್ತಾರೆ. ಒಂದು ವರದಿ ಸಿದ್ದಪಡಿಸುವಾಗ ಆ ವ್ಯಕ್ತಿ ಅಥವಾ ಸಂಸ್ಥೆಯ ನಾಲ್ಕೈದು ವರ್ಷದ ಆದಾಯ ತೆರಿಗೆ ವರದಿಯನ್ನು ಪರಿಶೀಲನೆ ಮಾಡಿರುತ್ತಾರೆ. ಆ ವೇಳೆ ಪ್ರತಿ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗಿದೆಯಾ ಅನ್ನೋದನ್ನು ಪತ್ತೆ ಮಾಡುವ ಅಧಿಕಾರಿಗಳ ತಂಡ ನಂತರ ಆದಾಯ ಹೆಚ್ಚಾದಂತೆ ತೆರಿಗೆ ಪಾವತಿಯೂ ಹೆಚ್ಚಳವಾಗಿದ್ಯಾ ಅನ್ನೋದನ್ನು ಪರಿಶೀಲನೆ ನಡೆಸಿ ದಾಳಿ ಬೇಕಾ ಬೇಡ್ವಾ ಅನ್ನೋ ರೂಪುರೇಷೆ ಸಿದ್ದಮಾಡಿಕೊಳ್ತಾರೆ. ಯಾವುದೋ ಒಂದು ಸಿನಿಮಾ ಹಿಟ್ ಆಯ್ತು ಅನ್ನೋ ಕಾರಣಕ್ಕೋ ಅಥವಾ ಯಾವುದೋ ಒಂದು ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಅನ್ನೋ ಕಾರಣಕ್ಕೋ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶ ಮಾಡುವುದಿಲ್ಲ ಎನ್ನುತ್ತಾರೆ ತಜ್ಞರು..

ಯಾವುದೇ ಒಂದು ಉದ್ಯಮದಲ್ಲಿ ಇರುವವರು ತೆರಿಗೆ ಪಾವತಿ ಮಾಡದೆ ಇರುವ ಸಾಧ್ಯತೆ‌ ಕಡಿಮೆ. ಅಲ್ಪಸ್ವಲ್ಪ ತೆರಿಗೆ ಉಳಿತಾಯಕ್ಕಾಗಿ ತೆರಿಗೆ ವಂಚನೆ ಮಾಡಿದ್ದರೆ ಎರಡು ದಿನ ತನಿಖೆ ಮಾಡುವ ಅಗತ್ಯ ಕಾಣಿಸುವುದಿಲ್ಲ. ಜೊತೆಗೆ ತೆರಿಗೆ ವಂಚನೆ ಮಾಡಿದ್ದಾರೆ ಎಂದರೆ ನೋಟಿಸ್ ಕೊಟ್ಟು ಕರೆಸಿಕೊಂಡು ದಂಡ ಹಾಕುವ ವಾಡಿಕೆಯೇ ಹೆಚ್ಚು. ಹೀಗಿರುವಾಗ ನಟರು, ನಿರ್ಮಾಪಕ ಮನೆ ಮೇಲೆ ನಿರಂತರವಾಗಿ ದಾಖಲೆ ಕಲೆ ಹಾಕುವ ಅವಶ್ಯಕತೆ ಇರೋದಿಲ್ಲ‌ ಅನ್ನೋ ಅಂಶವನ್ನೂ ಗಮನಿಸಬೇಕಾಗುತ್ತದೆ. ಜೊತೆಗೆ ಇವರೆಲ್ಲಾ ತೆರಿಗೆ ವಂಚನೆ ಮಾಡಿದ್ದರೆ, ಒಟ್ಟಿಗೆ ಚಿತ್ರರಂಗದ ಇಷ್ಟೊಂದು ಜನರ ಮೇಲೆ ಏಕಕಾಲಕ್ಕೆ ದಾಳಿ ಮಾಡುವ ಅವಶ್ಯಕತೆ ಏನಿತ್ತು ಅನ್ನೋ ಪ್ರಶ್ನೆಯನ್ನು ಆರ್ಥಿಕ ತಜ್ಞರೇ ಕೇಳುತ್ತಿದ್ದಾರೆ. ಈಗ ಎಲ್ಲರ ಮನಸ್ಅಲ್ಲಿ ಉದ್ಬವವಾಗಿರುವ ಅನುಮಾನ ಎಂದರೆ ನೋಟ್ ಬ್ಯಾನ್ ವೇಳೆ ನಡೆದಿರುವ ಹಣದ ವ್ಯವಹಾರ ಎನ್ನಲಾಗ್ತಿದೆ. ನೋಟ್ ಬಂಧಿ ವೇಳೆ ಇವರು ವ್ಯವಹಾರ ನಡೆಸಿದ್ದು ಎಲ್ಲರಿಗೂ ಒಂದಲ್ಲ ಒಂದು ರೀತಿ ಸಂಬಂಧವಿದ್ದು ಒಟ್ಟಿಗೆ ದಾಳಿ ಮಾಡಿದರೆ ವಿಚಾರಣೆಗೆ ಅನುಕೂಲ ಅನ್ನೋ ಲೆಕ್ಕಾಚಾರದಲ್ಲಿ ಹೀಗೆ ದಾಳಿ ನಡೆದಿದೆ. ಅಧಿಕಾರಿಗಳು ಅಲ್ಲಿಂದ ಇಲ್ಲಿಗೆ ಹೋಗುತ್ತಿರೋದು ಮಾಹಿತಿಯನ್ನು ಅಲ್ಲಿಂದ ಇನ್ನೊಂದು ಮನೆಗೆ ತೆರಳಿ ಹಂಚಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದು ಬರುತ್ತಿದೆ.

Leave a Reply