ಸಿಡ್ನಿಯಲ್ಲಿ ಸಿಡಿದ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ ಗಳು! ಬಳಲಿ ಬೆಂಡಾದ ಕಾಂಗರೂ ಬೌಲರ್ ಗಳು!

ಡಿಜಿಟಲ್ ಕನ್ನಡ ಟೀಮ್:

ಚೇತೇಶ್ವರ ಪೂಜಾರ (193), ರಿಷಬ್ ಪಂತ್ (153*), ರವೀಂದ್ರ ಜಡೇಜಾ (81) ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಬರೋಬ್ಬರಿ 622 ರನ್ ಕಲೆ ಹಾಕಿರುವ ಟೀಮ್ ಇಂಡಿಯಾ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಮೂರನೇ ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ.

ಇದುವರೆಗೂ ಕಾಂಗರೂಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲದ ಭಾರತ ತಂಡ ಈಗ ಹೊಸ ಇತಿಹಾಸ ಬರೆಯುವ ತವಕದಲ್ಲಿದೆ. ಪಂದ್ಯದ ಮೊದಲ ದಿನವೇ 303 ರನ್ ಕಲೆ ಹಾಕಿದ್ದ ಭಾರತ ಎರಡನೇ ದಿನ ತನ್ನ ಇನ್ನಿಂಗ್ಸ್ ಮುಂದುವರಿಸಿತು. ಹನುಮ ವಿಹಾರಿ, ಪೂಜಾರ ಜತೆ ಅರ್ಧ ಶತಕದ ಜಟಯಾಟವಾಡಿದರು. ಆದರೆ 42 ರನ್ ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆಗ ಪೂಜಾರ ಜತೆಯಾದ ಪಂತ್ ತಂಡಕ್ಕೆ ಶತಕದ ಜತೆಯಾಟ ನೀಡಿದರು. ಪೂಜಾರ ದ್ವಿಶತಕದತ್ತ ಸಾಗಿದರೂ 190ರ ಗಡಿಯಲ್ಲಿ ವಿಚಲಿತರಾದ ಪೂಜಾರ ಲಯಾನ್ ಗೆ ವಿಕೆಟ್ ನೀಡಿದರು.

ಆನಂತರ ಪಂತ್ ಜತೆ ರವೀಂದ್ರ ಜಡೇಜಾ ಸೇರಿದ ನಂತರ ಸಿಡ್ನಿ ಮೈದಾನದಲ್ಲಿ ಬೌಂಡರಿ ಸಿಕ್ಸರ್ ಮಳೆ ಸುರಿದವು. ಪಂತ್ 150ರ ಗಡಿ ಮುಟ್ಟಿ ಅತ್ಯುತ್ತಮ ಆಟವಾಡಿದರು. ಅದರೊಂದಿಗೆ ವಿದೇಶಿ ನೆಲದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಭಾರತದ ವಿಕೆಟ್ ಕೀಪರ್ ಆದರು. ಆಮೂಲಕ ಮಹೇಂದ್ರ ಸಿಂಗ್ ಧೋನಿ(148) ಅವರ ದಾಖಲೆ ಮುರಿದರು. ಈ ಜೋಡಿ 7ನೇ ವಿಕೆಟ್ ಗೆ 204 ರನ್ ಜತೆಯಾಟವಾಡಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ 7ನೇ ವಿಕೆಟ್ ಗೆ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ಈಗಾಗಲೇ ಭಾರತ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದ್ದು ಈ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದೆ. ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೂ ಸರಣಿ ಭಾರತದ ಮಡಿಲಿಗೆ ಬೀಳಲಿದೆ.

Leave a Reply