ಸಚಿವ ಸತೀಶ್ ಸಮ್ಮುಖದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಅಭಯ ಪಾಟೀಲ್ ವಾಗ್ವಾದ!

ಡಿಜಿಟಲ್ ಕನ್ನಡ ಟೀಮ್:

ಅಮೃತ ಯೋಜನೆಗೆ ಹಲಗಾ ಗ್ರಾಮದ ರೈತರ ಫಲವತ್ತಾದ ಭೂಮಿ ನೀಡುವ ವಿಷಯವಾಗಿ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲ ಕಿತ್ತಾಡಿಕೊಂಡಿದ್ದಾರೆ.

ಶನಿವಾರ ನಡೆದ ಸಭೆಯಲ್ಲಿ ಇಬ್ಬರು ಶಾಸಕರ ನಡುವೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಹಲಗಾ ಗ್ರಾಮದಲ್ಲಿ ಸ್ಥಾಪಿಸಲು ಹೊರಟಿರುವ ಒಳಚರಂಡಿ ಶುದ್ಧೀಕರಣ ಘಟಕವನ್ನು ಸ್ಥಾಪಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.

ಶಾಸಕರು ಒಬ್ಬರಿಗೊಬ್ಬರು ನಾವೇನು ಕಮ್ಮಿಯಿಲ್ಲ ಎನ್ನುವಂತೆ ಮಾತಿನ ಯುದ್ಧ ನಡೆಸಿದರು.
ಶಾಸಕರಿಬ್ಬರು ಕಿತ್ತಾಡಿಕೊಳ್ಳುತ್ತಿದ್ದರೆ ಸಭೆಯ ನೇತೃತ್ವ ವಹಿಸಿದ್ದ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದರು, ಶಾಸಕರು ಮೌನಕ್ಕೆ ಜಾರಿದ್ದರು.

ಶುದ್ದೀಕರಣ ಘಟಕವನ್ನು ಬೆಳಗಾವಿ ಗ್ರಾಮೀಣದಲ್ಲಿ ಸ್ಥಾಪಿಸುವುದು ಬೇಡ, ಬೇಕಾದರೆ ಬೆಳಗಾವಿ ದಕ್ಷಿಣದಲ್ಲಿ ಖಾಲಿ ಇರುವ ಸ್ಥಳದಲ್ಲಿ ನಿರ್ಮಿಸಿ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಅದಕ್ಕೆ ಅಭಯ ಪಾಟೀಲ ಆಕ್ಷೇಪಿಸಿದರು.

ಮಹಾನಗರ ಪಾಲಿಕೆಯಿಂದ ಕೇಂದ್ರ ಸರಕಾರದ ಅಮೃತ ಯೋಜನೆಯಡಿ ಹಲಗಾ ಗ್ರಾಮದಲ್ಲಿ ಒಳಚರಂಡಿ ಶುದ್ಧೀಕರಣ ಘಟಕವನ್ನು ಸ್ಥಾಪಿಸುವ ಉದ್ದೇಶ ಇದೆ. ಇದಕ್ಕಾಗಿ ಹಲಗಾ ಗ್ರಾಮದ 19 ಎಕರೆ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಆದರೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಫಲವತ್ತಾದ ಭೂಮಿಯನ್ನು ನಾವು ಕೊಡುವುದಿಲ್ಲ.ಬೇಕಾದರೆ ನಮಗೆ ನೀವು ವಿಷ ಕೊಡಿ. ನಮ್ಮ ಭೂಮಿಯನ್ನು ಕಿತ್ತುಕೊಳ್ಳಬೇಡಿ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಬಳಿ ಕೈಮುಗಿದ ಲಕ್ಷ್ಮೀ ಹೆಬ್ಬಾಳಕರ ತಮ್ಮ ಅಳಲು ತೋಡಿಕೊಂಡರು.

ನಾವು ವಿಧಾನಸೌಧಕ್ಕೆ ಭೂಮಿ ಕೊಟ್ಟಿದ್ದೇವೆ. ಪದೇ ಪದೇ ಹಲಗಾ ಗ್ರಾಮದ ರೈತರ ಭೂಮಿ ಮೇಲೆ ಯಾಕೇ ಪಾಲಿಕೆ ಕಣ್ಣು ಹಾಕುತ್ತಿದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.

ಬಳಿಕ ಸಂಸದ ಪ್ರಕಾಶ ಹುಕ್ಕೇರಿ ಅವರ ಸೂಚನೆಯಂತೆ ರೈತರು ಮತ್ತು ಅಧಿಕಾರಿಗಳ ಸಮಿತಿ ರಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.

Leave a Reply