ಎಳು ದಶಕಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಟೀಮ್ ಇಂಡಿಯಾ!

ಡಿಜಿಟಲ್ ಕನ್ನಡ ಟೀಮ್:

ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಮೂಲಕ ತನ್ನ 70 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲುವ ಮೂಲಕ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ತಾನೇ ಸಾರ್ವಭೌಮ ಎಂಬ ಸಂದೇಶ ರವಾನಿಸಿದೆ. ಜತೆಗೆ ತವರಿನಲ್ಲಿ ಹುಲಿ ವಿದೇಶದಲ್ಲಿ ಇಲಿ ಎಂದು ಲೇವಡಿ ಮಾಡುತ್ತಿದ್ದವರ ಬಾಯಿಗೆ ಬೀಗ ಜಡಿದಿದೆ.

ಅಡಿಲೇಡ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 32 ರನ್ ಗಳ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ, ಪರ್ತ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿತು. ಮೆಲ್ಬೋರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ 137 ರನ್ ಗಳಿಂದ ಗೆದ್ದ ಕೊಹ್ಲಿ ಬಳಗ ಮತ್ತೇ ಸರಣಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲೂ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಮೆರೆಯಿತು. ಆದರೆ ವರುಣನ ಅಡ್ಡಿ ಭಾರತದ 3-1 ಅಂತರದ ಸರಣಿ ಜಯಕ್ಕೆ ಕಲ್ಲು ಹಾಕಿತು. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲೆ ಫಾಲೋ ಆನ್ ಹೇರುವ ಮೂಲಕ ಭಾರತ ಮತ್ತೊಂದು ಸಾಧನೆ ಮಾಡಿತು.

30 ವರ್ಷಗಳ ಬಳಿಕ ಭಾರತ ಆಸ್ಟ್ರೇಲಿಯಾದಲ್ಲಿ ಕಾಂಗರೂ ಪಡೆ ವಿರುದ್ಧದ ಪಂದ್ಯದಲ್ಲಿ ಫಾಲೋ ಆನ್ ಹೇರಿತು. ಕಳೆದ ಬಾರಿ ಭಾರತ ಸಿಡ್ನಿ ಅಂಗಳದಲ್ಲೇ ಫಾಲೋ ಆನ್ ಹೇರಿದ್ದು ವಿಶೇಷ. ಇನ್ನು 2005ರ Ashes ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೇಡ್ ವಿರುದ್ಧ ಫಾಲೋ ಆನ್ ಪಡೆದಿದ್ದ ಕಾಂಗರೂ ಪಡೆ, ಸುದೀರ್ಘ 13 ವರ್ಷಗಳ ಕಾಲ ಯಾವುದೇ ತಂಡದಿಂದ ಫಾಲೋ ಆನ್ ಗೆ ಸಿಲುಕಿರಲಿಲ್ಲ. ಕೊಹ್ಲಿ ಪಡೆ ಆಸೀಸ್ ತಂಡಕ್ಕೆ ಫಾಲೋ ಆನ್ ನೀಡಿ ತನ್ನ ಸಾಮರ್ಥ್ಯ ಮೆರೆಯಿತು.

ಈ ಅಭೂತಪೂರ್ವ ಸರಣಿ ಜಯದೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲುವ ತವಕದಲ್ಲಿದೆ.

Leave a Reply