ಎರಡು ದಿನ ಭಾರತ್ ಬಂದ್.. ಏನಿರುತ್ತೆ..? ಏನಿರಲ್ಲ..?

ಡಿಜಿಟಲ್ ಕನ್ನಡ ಟೀಮ್:

ಜನವರಿ 8 ಮತ್ತು 9 ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಹಾಗೂ ಎಡಪಕ್ಷಗಳು ಕರೆ ನೀಡಿದ್ದು, ಇಡೀ ದೇಶವೇ ಸ್ತಬ್ಧವಾಗುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯವಾಗಿ ಸಾರಿಗೆ ಸಿಬ್ಬಂದಿ ಬಂದ್‌ಗೆ ಕರೆ ಕೊಟ್ಟಿದ್ದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆಗಳು ನಡೆಯಲಿವೆ. ಪ್ರಮುಖವಾಗಿ ಕನಿಷ್ಠ ವೇತನ ಜಾರಿಗೆ ಆಗ್ರಹ ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಿದ್ದಾರೆ..

ವಿವಿಧ ಸಂಘಟನೆಗಳಿಂದ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ಸಾರಿಗೆ ಬಂದ್ ವೇಳೆ KSRTC, BMTC ಬಸ್‌ಗಳ ಸಂಚಾರ‌ ಇರುವ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಮದ್ದೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ, ಭಾರತ್ ಬಂದ್ ಹಿನ್ನಲೆಯಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಳಿಸಲಿದ್ದೇವೆ. ಕೇರಳದಲ್ಲಿ ನಡೆದ ಘಟನೆಯಲ್ಲಿ ರಾಜ್ಯ ಹಲವು ಬಸ್‌ಗಳಿಗೆ ಹಾನಿಯಾಗಿದೆ. ಬಂದ್ ಪರಿಸ್ಥಿತಿ ಸರಿ ಇಲ್ಲವೆಂದ್ರೆ ಬಸ್ ಸಂಚಾರ ಮಾಡೋದಿಲ್ಲ, ಬಂದ್ ಪರಿಸ್ಥಿತಿ ಆಧಾರದ ಮೇಲಿನ ಬಸ್  ಸಂಚಾರ ವ್ಯವಸ್ಥೆ ಇರುತ್ತೆ ಎಂದಿದ್ದಾರೆ. ಸಚಿವರೇ ಹೀಗೆ ಹೇಳಿದ ಮೇಲೆ‌ ಸಂಚಾರ ಇರುತ್ತೆ ಎಂದು ಭಾವಿಸಲು ಸಾಧ್ಯವಿಲ್ಲ.

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭದ್ರತೆಗಾಗಿ 54 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಕರ್ತವ್ಯಕ್ಕೆ ಪೊಲೀಸರ ನಿಯೋಜನೆ ಮಾಡಿದ್ದೇವೆ ಎಂದು ಗೃಹ‌ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ‌ಮೀಸಲು ಪಡೆಯ 127 ತುಕಡಿಗಳನ್ನು ಪೊಲೀಸರ ಸಹಾಯಕರಾಗಿ ನೇಮಕ ಮಾಡಲಾಗಿದ್ದು, ಮುಷ್ಕರ ಸಮಯದಲ್ಲಿ ಯಾವುದೇ ಪ್ರತಿಭಟನೆ, ಸಭೆ ಮತ್ತು ಮೆರವಣಿಗೆ ನಡೆಸಲು ಅವಕಾಶ ಇಲ್ಲ. ಮುಷ್ಕರ ಸಮಯದಲ್ಲಿ ತುರ್ತು ಸೇವೆಗಳಾದ ಆಂಬ್ಯುಲೆನ್ಸ್, ಔಷಧಿ, ಆಸ್ಪತ್ರೆ, ಹಾಲು ಪೂರೈಕೆ ಸೇರಿದಂತೆ ಇನ್ನಿತರ ಸೇವೆಗಳಿಗೆ ಅಡ್ಡಿ ಉಂಟು ಮಾಡಲು ‌ಅವಕಾಶ ನೀಡುವುದಿಲ್ಲ. ಒಂದು ವೇಳೆ ಇಂತಹ ಸೇವೆಗಳಿಗೆ ಬಲವಂತವಾಗಿ ಅಡ್ಡಿಪಡಿಸಿದರೆ ಕಾನೂನು ಕ್ರಮ‌ ಕೈಗೊಳ್ಳುವಂತೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ ಸಚಿವರು. ಬಂದ್ ವೇಳೆ‌ ಶಾಂತಿಯುತವಾಗಿ ಪ್ರತಿಭಟಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ನಡುವೆ ಬಿಜೆಪಿ ಕಾರ್ಮಿಕ ಸಂಘಟನೆಗಳು ಹಾಗೂ ಎಡಪಕ್ಷಗಳ ಭಾರತ್ ಬಂದ್‌ಗೆ ಖಂಡನೆ ವ್ಯಕ್ತಪಡಿಸಿದ್ದು, ಇದು ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟ. ಜನತೆ ಮುಷ್ಕರಕ್ಕೆ ಕೈ ಜೋಡಿಸಬಾರದು ಎಂದು ಮನವಿ ಮಾಡಿದೆ. ಇನ್ನು ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ರಜೆ ಘೋಷಣೆ ಬಗ್ಗೆ ಅಲ್ಲಿನ ಜಿಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Leave a Reply