ಲೋಕ ಸಮರಕ್ಕೆ ಜೆಡಿಎಸ್ ಸೂತ್ರ ಒಪ್ಪುತ್ತಾ ಕಾಂಗ್ರೆಸ್..?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಬ್ಬರಿಸಲು ಸಜ್ಜಾಗಿದ್ದು, ಬರೋಬ್ಬರಿ 12 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಕನಿಷ್ಠಪಕ್ಷ ಹತ್ತು ಸ್ಥಾನಗಳಲ್ಲಿ ಆದರೂ ಸ್ಪರ್ಧೆ ಮಾಡಲೇ ಬೇಕು ಅನ್ನೋ ಹಠಕ್ಕೆ ಬಿದ್ದಿರೋ ಮಾಹಿತಿ ಹೊರ ಬಿದ್ದಿದೆ. ಒಂದು ವೇಳೆ ಕಾಂಗ್ರೆಸ್ ಒಪ್ಪದಿದ್ರೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ಬಗ್ಗೆಯೂ ಶಾಸಕಾಂಗ ಸಭೆಯಲ್ಲಿ ಮಾತುಗಳು ಕೇಳಿ ಬಂದಿವೆ. ಶಾಸಕರು ಹಾಗೂ ಜೆಡಿಎಸ್ ಮುಖಂಡರ ಮಾತುಗಳನ್ನು ಆಲಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನೀವ್ಯಾರು ತಲೆ ಕೆಡಿಸಿಕೊಳ್ಳಬೇಡಿ. ನಾನು ನೇರವಾಗಿ ರಾಹುಲ್ ಗಾಂಧಿ ಹಾಗೂ ಅಹ್ಮದ್ ಪಟೇಲ್ ಬಳಿ ಮಾತನಾಡ್ತೇನೆ ಎಂದಿರುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಈ ಸರ್ಕಾರ ರಚನೆ ವೇಳೆ ಆಗಿರುವ ಒಪ್ಪಂದದ ಪ್ರಕಾರ ಮೂರನೆ ಒಂದು ಭಾಗ ಜೆಡಿಎಸ್‌ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಬಿಟ್ಟುಕೊಡಲೇ ಬೇಕು. ಎಲ್ಲ ರೀತಿಯ ಅಧಿಕಾರ ಹಂಚಿಕೆಯಲ್ಲೂ ಈ ಸೂತ್ರ ಅನ್ವಯವಾಗಲಿದೆ. ಆದ್ರೆ ಲೋಕಸಭೆಯಲ್ಲಿ‌ಎರಡು ಸ್ಥಾನವನ್ನು ಕಾಂಗ್ರೆಸ್ ನಮಗೆ ಹೆಚ್ಚು ಬಿಟ್ಟುಕೊಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ. ಎರಡನೇ ಒಂದು ಸ್ಥಾನ ಅನ್ನೋ ಲೆಕ್ಕಾಚಾರದಲ್ಲಿಯೇ ಲೋಕಸಭೆ ಚುನಾವಣೆ ಸೀಟನ್ನೂ 10 ಸ್ಥಾನ ಜೆಡಿಎಸ್‌ಗೆ ಬರಬೇಕು. 12 ಸ್ಥಾನ ಬೇಕು ಎನ್ನುವುದು ನಮ್ಮ ಮನವಿ ಆದ್ರೆ ಅದಕ್ಕಾಗಿ ಅಂಟಿಕೊಂಡು ಹಠ ಮಾಡುವುದಿಲ್ಲ ಎಂದಿದ್ದಾರೆ ದೊಡ್ಡಗೌಡರು.

ಉತ್ತರ ಕರ್ನಾಟಕದ ನಾಲ್ಕು ಕೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ವಿಜಯಪುರ, ಬೀದರ್, ಯಾದಗಿರಿ, ರಾಯಚೂರು ಲೋಕಸಭಾ ಕ್ಷೇತ್ರಗಳನ್ನು ಕೇಳಿಕೊಂಡಿದೆ. ಇನ್ನು ಜೆಡಿಎಸ್ ತವರು ಮಂಡ್ಯ, ಹಾಸನ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಕ್ಷೇತ್ರಗಳನ್ನು ತನಗೆ ಬಿಟ್ಟು ಕೊಡಲೇ ಬೇಕು ಅನ್ನೋ ಹಠಕ್ಕೆ ಬಿದ್ದಿದೆ. ಈ ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಇದೆ ಎನ್ನುವ ಮೂಲಕ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ ಹೆಚ್.ಡಿ ದೇವೇಗೌಡರು. ಇನ್ನು ಎರಡು ಕ್ಷೇತ್ರಗಳನ್ನು ಪಡೆದುಕೊಳ್ಳುವ ವಿಚಾರದಲ್ಲಿ ವೇಣುಗೋಪಾಲ್ ಜೊತೆ ಚರ್ಚೆ ನಡೆಸುತ್ತೇನೆ. ಆ ಬಳಿಕ ದೆಹಲಿ ಮಟ್ಟದಲ್ಲಿ ರಾಹುಲ್ ಗಾಂಧಿ ಹಾಗೂ ಅಹ್ಮದ್ ಪಟೇಲ್ ಜೊತೆ ಚರ್ಚೆ ಮಾಡ್ತೀನಿ ಎಂದಿದ್ದಾರೆ. ಒಟ್ಟಾರೆ ಹನ್ನೆರಡು ಸ್ಥಾನಗಳನ್ನು ಕೇಳುತ್ತಿರುವ ಜೆಡಿಎಸ್‌ಗೆ 12 ಸ್ಥಾನಗಳನ್ನು ಬಿಟ್ಟುಕೊಡದಿದ್ರೂ ಹತ್ತು ಸ್ಥಾನಗಳಿಗಾದರೂ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಮಾತಿಗೆ ಮಣೆ ಹಾಕುತ್ತಾ ಎಂಬುದು ಸದ್ಯದ ಕುತೂಹಲ.

Leave a Reply