ಕಾಂಗ್ರೆಸ್‌ಗೆ ರಾಜೀನಾಮೆ ಕೊಡ್ತಾರಾ ಚಲುವರಾಯಸ್ವಾಮಿ..?

ಮಂಡ್ಯ ರಾಜಕಾರಣದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ. ಕೆಲವೊಂದು ತಪ್ಪು ಹೆಜ್ಜೆಗಳು ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ರಾಜಕೀಯ ಅಜ್ಞಾತವಾಸಕ್ಕೆ ದೂಡಿದ್ದು ಕೆಲವೇ ದಿನಗಳಲ್ಲಿ ನಡೆಯುವ ಯುದ್ಧದಲ್ಲಿ ಜಯಗಳಿಸಿ ಮತ್ತೆ ಮುನ್ನಲೆಗೆ ಬರುವ ಆಶಯದಲ್ಲಿ ಚಲುವರಾಯಸ್ವಾಮಿ ಅವರ ಅಭಿಮಾನಿಗಳಿದ್ದಾರೆ. ಚಲುವರಾಯಸ್ವಾಮಿ ಈಗಾಗಲೇ ಒಂದು ಬಾರಿ ಜೆಡಿಎಸ್‌ನಿಂದ ಸಂಸದನಾಗಿದ್ದು, ದೆಹಲಿ ರಾಜಕಾರಣಕ್ಕೆ ಪರಿಚಿತರು. ಹೀಗಾಗಿ ವಿಧಾನಸೌದ ಬಿಟ್ಟು ಸಂಸತ್ ಭವನಕ್ಕೆ ತೆರಳಲು ಸಜ್ಜಾಗುತ್ತಿದ್ದಾರೆ. ಇದೀಗ ಜೆಡಿಎಸ್‌ನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗಳು ಕೂಡ ಚಲುವರಾಯಸ್ವಾಮಿಗೆ ಅನುಕೂಲಕರ ವಾತಾವರಣ ನಿರ್ಮಿಸಿವೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಅಭ್ಯರ್ಥಿ ಮಾಡಲು ವೇದಿಕೆ ರೂಪುಗೊಳ್ಳುತ್ತಿದೆ. ಈಗಾಗಲೇ ಮಂಡ್ಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದಿರುವ ಜೆಡಿಎಸ್ ಮುಖಂಡರು ನಿಖಿಲ್ ಅಭ್ಯರ್ಥಿಯಾದರೆ ಗೆಲ್ಲಿಸಿಕೊಂಡು ಬರುವ ಬಗ್ಗೆ ಜವಾಬ್ದಾರಿ ತೆಗೆದುಕೊಳ್ತೀರಾ ಎಂದು ಸವಾಲು ಕೊಟ್ಟಿದ್ದಾರೆ. ಇದರ ಭಾಗವಾಗಿಯೇ ಮಂಡ್ಯದ ಮದ್ದೂರಿನಲ್ಲಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ ಎನ್ನುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜಿಲ್ಲೆಯ ಜನಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆ. ಆದ್ರೆ ಈ ಬಗ್ಗೆ ವರಿಷ್ಠರು, ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ತೀರ್ಮಾನ ಮಾಡಬೇಕು. ಇದು ನನ್ನ ತೀರ್ಮಾನ ಅಲ್ಲ, ನನ್ನ ಪಕ್ಷದ ತೀರ್ಮಾನ. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎನ್ನುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮಂಡ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಮಾಜಿ ಮಿನಿಸ್ಟರ್ ಚಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮಂಡ್ಯದಲ್ಲಿ ಚಲುವರಾಯಸ್ವಾಮಿಗೆ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ದೇವೇಗೌಡರ ಕುಟುಂಬವನ್ನು ನೇರವಾಗಿ ಎದುರು ಹಾಕಿಕೊಂಡ ಕಾರಣದಿಂದ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಚಲುವರಾಯಸ್ವಾಮಿ ಅವರನ್ನು ಬಿಜೆಪಿಗೆ ಸೆಳೆದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ. ಆದ್ರೆ ಚಲುವರಾಯಸ್ವಾಮಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಪಕ್ಷ ನಿಷ್ಟರು ಬೆಂಬಲ ನೀಡುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಚಲುವರಾಯಸ್ವಾಮಿ ಪಕ್ಷೇತರರ ಅಭ್ಯರ್ಥಿಯಾಗಿ ಲೋಕಸಭಾ ಅಖಾಡಕ್ಕೆ ಎಂಟ್ರಿ ಕೊಟ್ರೆ, ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಎಲ್ಲಾ ಕಾಂಗ್ರೆಸ್ಸಿಗರು ಚಲುವರಾಯಸ್ವಾಮಿ ಅವರನ್ನು ಬೆಂಬಲಿಸುತ್ತಾರೆ. ಇನ್ನು ಜೆಡಿಎಸ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಅಭ್ಯರ್ಥಿತನವನ್ನು ಒಪ್ಪದೇ ಇರುವ ಜನರೂ ಕೂಡ ಚಲುವರಾಯಸ್ವಾಮಿ ಕೈ ಹಿಡಿಯುತ್ತಾರೆ. ಇನ್ನು ಕಾಂಗ್ರೆಸ್ ಜೆಡಿಎಸ್ ಅನ್ನು ಮಣಿಸುವ ಉದ್ದೇಶದಿಂದ ಕಮಲ ಕಾರ್ಯಕರ್ತರು ಮತ ನೀಡುವ ಸಾಧ್ಯತೆ ಇದೆ. ಹೀಗಾಗಿ ಚಲುವರಾಯಸ್ವಾಮಿ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

Leave a Reply