ಹೆತ್ತವರ ಮಾತು ಕೇಳ್ರಪ್ಪಾ; ವಿದ್ಯಾರ್ಥಿಗಳಿಗೆ ಸಿಎಂ ಬುದ್ಧಿಮಾತು

 

ಡಿಜಿಟಲ್ ಕನ್ನಡ ಟೀಮ್

ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ವೇಣುಗೋಪಾಲನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಹೆಚ್‍.ಡಿ. ಕುಮಾರಸ್ವಾಮಿ ಅವರು, ಹೆತ್ತವರ ಮಾತಿನಲ್ಲಿರುವ ಕಾಳಜಿಯನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ.

ವೇಣುಗೋಪಾಲ್ ಅವರ ತಾಯಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದು, ಎಸ್‍ಎಸ್‍ಎಲ್‍ಸಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ ಹೀಗಾಗಿ ಪರೀಕ್ಷೆ ಬರೆದು ತೇರ್ಗಡೆಯಾಗುವಂತೆ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ವೇಣುಗೋಪಾಲನಿಗೆ ಮುಖ್ಯಮಂತ್ರಿಗಳು ಬುದ್ಧಿ ಹೇಳಿದ್ದು, ‘ಹೆತ್ತವರು ಹೇಳಿದ ಮಾತಿಗೆ ನೊಂದುಕೊಂಡು ಇಂತಹ ಕ್ರಮ ಕೈಗೊಳ್ಳುವುದು ಸರಿಯಲ್ಲ. ಹೆತ್ತವರ ಇಂತಹ ಬುದ್ಧಿಮಾತುಗಳ ಹಿಂದಿನ ಕಾಳಜಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಯುವಕ ‘ತಾನು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ನಂಗೆ ಆ ಕ್ಷಣದಲ್ಲಿ ಏನಾಯಿತೊ ಗೊತ್ತಿಲ್ಲ ಎಂದಿದ್ದಾನೆ.

‘ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಮಕ್ಕಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸ ಮಾಡುವ ವಾತಾವರಣವನ್ನು ಶಾಲೆ/ ಕಾಲೇಜುಗಳು ಹಾಗೂ ಹೆತ್ತವರು ನಿರ್ಮಿಸಬೇಕು. ಅಂತೆಯೇ ಮಕ್ಕಳು ತಮ್ಮ ಶಿಕ್ಷಕರು, ಪೋಷಕರ ಬುದ್ಧಿಮಾತುಗಳನ್ನು ಸದ್ಭಾವನೆಯಿಂದ ಸ್ವೀಕರಿಸಿ, ಓದಿನತ್ತ ಗಮನಹರಿಸಬೇಕು’ ಎಂದು ಸಂದೇಶ ಸಾರಿದ್ದಾರೆ.

Leave a Reply