ಬಿಜೆಪಿಗೆ ಸೇರುತ್ತೇನೆ ಎಂದಿದ್ದು ತಮಾಷೆಗೆ, ನಾನು ಕಾಂಗ್ರೆಸ್ ಬಿಡಲ್ಲ: ಗಣೇಶ ಹುಕ್ಕೇರಿ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್:

‘ನಾನು ಬಿಜೆಪಿ ಸೇರುತ್ತೇನೆ ಎಂದು ತಮಾಷೆಗೆ ಹೇಳಿದ್ದೆ, ಅದು ನಿಜವಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ…’ ಇದು ವಿಧಾನಸಭೆ ಮುಖ್ಯ ಸಚೇತಕ‌ ಗಣೇಶ ಹುಕ್ಕೇರಿ ನೀಡಿರುವ ಸ್ಪಷ್ಟನೆ.

ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು…

‘ನಾನು‌ ಬಿಜೆಪಿ ಸೇರುವುದಾಗಿ ತಮಾಷೆಗೆ ಹೇಳಿದ್ದೆ,ಅದು ಕೇವಲ ತಮಾಷೆಯಾಗಿದೆಯೇ ಹೊರತು ನಿಜವಲ್ಲ. ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರ ಜತೆ‌ ಶನಿವಾರ ಚರ್ಚೆ ಮಾಡಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವುದು ಹೇಗೆ ಎಂಬುದರ‌ ಕುರಿತು ತಯಾರಿ ನಡೆಸಲಾಗಿದೆ. ಕಾಂಗ್ರೆಸ್ ನಮ್ಮ‌ ಕುಟುಂಬಕ್ಕೆ ಎಲ್ಲಾ ಸ್ಥಾನಮಾನ‌ ನೀಡಿದೆ. ನಾನು ಕಾಂಗ್ರೆಸ್ ಪಕ್ಷದ‌ ನಿಷ್ಠಾವಂತ ಕಾರ್ಯಕರ್ತನಾಗಿರುವೆ. ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು‌ ಮುಂದಿನ ಲೋಕಸಭೆ ಚುನಾವಣೆಯಲ್ಲಿ‌ ನಮ್ಮ ತಂದೆ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ರಣತಂತ್ರ ರೂಪಿಸಲಾಗುತ್ತಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿಗೆ ಗೆಲವು ಖಚಿತ. ನಮ್ಮ‌ ಕುಟುಂಬದಲ್ಲಿ ಕಾಂಗ್ರೆಸ್‌ ಹಾಗೂ ಆದರ ನಾಯಕರ ಬಗ್ಗೆ ಯಾವುದೆ ಅಸಮಾಧಾನವಿಲ್ಲ.’

Leave a Reply