ದೆಹಲಿಯಲ್ಲಿ ಬಿಜೆಪಿ ಸ್ಕೆಚ್! ಸರ್ಕಾರಕ್ಕೆ ಕಂಟಕವಿಲ್ಲ ಎನ್ನುತ್ತಿದ್ದಾರೆ ಮೈತ್ರಿ ನಾಯಕರು

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಗೆ ಸಿದ್ಧತೆ ಹಾಗೂ ಪೂರ್ವ ತಯಾರಿ ಹೆಸರಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ಅಮಿತ್ ಶಾ ಸಭೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಇವತ್ತೂ ಕೂಡ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ. ಸಂಸತ್ ಚುನಾವಣೆಗೆ ಸಿದ್ಧತೆ ಎಂದು ಬಿಜೆಪಿ ನಾಯಕರು ಎಷ್ಟೇ ಹೇಳಿದರು ರಾಜಕೀಯ ಪಂಡಿತರು ಒಪ್ಪಲು ಸಿದ್ಧರಿಲ್ಲ.‌

ಆಪರೇಷನ್ ಕಮಲ ಮಾಡ್ತಾರೆ ಅನ್ನೋದು ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ಗೊತ್ತಾಗ್ತಿದ್ದ ಹಾಗೆ ಕೌಂಟರ್ ಆಪರೇಷನ್ ಮಾಡಲು ಮೈತ್ರಿ ಸರ್ಕಾರ ಇಡೀ‌ ಆಡಳಿತ ಯಂತ್ರದ ಸಮೇತ ಫೀಲ್ಡಿಗೆ ಇಳಿಯುತ್ತೆ.‌ ಕೌಂಟರ್ ಆಪರೇಷನ್‌ನಿಂದ ಬಿಜೆಪಿ ಶಾಸಕರನ್ನು ಉಳಿಸಿಕೊಳ್ಳೋದು‌ ಕಷ್ಟವಾಗಲಿದೆ. ಅದೇ ಕಾರಣಕ್ಕಾಗಿ ಬಿಜೆಪಿ ನಾಯಕರು ದೆಹಲಿಯಲ್ಲೇ ಸೇಫ್‌ಗಾರ್ಡ್ ಮಾಡಲು‌ ನಿರ್ಧರಿಸಿದ್ದಾರೆ‌ ಎನ್ನಲಾಗಿದೆ.

ಬಿಜೆಪಿ ತಂತ್ರ ಮೈತ್ರಿ ಸರ್ಕಾರಕ್ಕೆ ಗೊತ್ತಾಗ್ತಿದ್ದ ಹಾಗೆ ಅಖಾಡಕ್ಕಿಳಿದ ಕಾಂಗ್ರೆಸ್ ನಾಯಕರು ಉಪಹಾರದ ನೆಪದಲ್ಲಿ ಎಲ್ಲಾ ಸಚಿವರನ್ನು ಒಂದೆಡೆ ಸೇರಿಸುವ ನಿರ್ಧಾರ ಮಾಡಿದರು. ಅದರಂತೆ ಇಂದು‌ ಬೆಳಗ್ಗೆ‌ ಅಶೋಕ ಹೋಟೆಲ್‌ನಲ್ಲಿ ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದರು.

ಉಪಹಾರ ಕೂಟದಲ್ಲಿ ಆಪರೇಶನ್ ಕಮಲದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. ಆಪರೇಷನ್ ಕಮಲ ಮಾಡ್ತಿರೋದು ಸತ್ಯ. ನಿಮಗೆ ಸಚಿವ ಸ್ಥಾನ ಸಿಕ್ಕಿದೆ. ಕೆಲವರಿಗೆ ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ಅಸಮಾಧಾನ ಇರಬಹುದು. ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಸಚಿವರು ಅಸಮಾಧಾನಗೊಂಡಿರುವ ಶಾಸಕರನ್ನು ಪಕ್ಷ ಬಿಡದಂತೆ ತಡೆಯುವುದು ನಿಮ್ಮ ಕೆಲಸ ಅಂತಾ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದೇ ವೇಳೆ ಸಿದ್ದರಾಮಯ್ಯ ಸಚಿವರ ತಂಡಕ್ಕೆ ಬಿ ಅಲರ್ಟ್ ಎಂದು ತಿಳಿಸಿದ್ದು. ಯಾವುದೇ ಕಾರಣಕ್ಕೂ ಆಪರೇಶನ್‌ ಕಮಲ ಯಶಸ್ವಿ ಆಗಬಾರದು, ದೋಸ್ತಿ ಸರ್ಕಾರದ ರಕ್ಷಣೆಗೆ ಎಲ್ಲರೂ ಬದ್ಧರಾಗಿರಿ. ಲೋಕಸಭೆ ಚುನಾವಣೆ ನಮಗೆ ಪ್ರಮುಖ, ಅಲ್ಲಿವರೆಗೂ ನಾವು ಹೆಚ್ಚು ಅಲರ್ಟ್ ಆಗಿರೋದು ಸೂಕ್ತ ಎಂದು ತಿಳಿಸಿದ್ದಾರೆ.

ಇನ್ನು ಮಾಧ್ಯಮಗಳ ಜೊತೆ ಡಿಸಿಎಂ ಪರಮೇಶ್ವರ್ ಮಾತನಾಡಿ, ಬಜೆಟ್ ಮಂಡನೆ ಬಗ್ಗೆ ನಮ್ಮ ಸಚಿವರ ಜೊತೆ ಮಾತನಾಡುವ ಉದ್ದೇಶದಿಂದ ಉಪಹಾರ ಕೂಟ ಆಯೋಜನೆ ಮಾಡಿದ್ದೆವು. ಮೈತ್ರಿ ಸರ್ಕಾರದಲ್ಲಿ ಸಿಎಂ ಬಜೆಟ್ ಮಂಡನೆ ಮಾಡಲಿದ್ದು, ಕೆಲವೊಂದು ಯೋಜನೆಗಳ ಬಗ್ಗೆ ಚರ್ಚೆ ಮಾಡುವುದು ಇರುತ್ತದೆ ಎಂದಿದ್ದಾರೆ. ಆದ್ರೆ ಅಸಲಿ ವಿಷಯ ಅಂದ್ರೆ ದೆಹಲಿಯಲ್ಲಿ ಕಮಲ ನಾಯಕರು ಸರ್ಕಾರ ಉರುಳಿಸುವ ತಂತ್ರಗಾರಿಕೆ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಕಂಗಾಲಾಗುವಂತೆ ಮಾಡಿದೆ. ಇದೇ ಕಾರಣಕ್ಕೆ ಉಪಹಾರ ಆಯೋಜಿಸಿ ಆಪರೇಷನ್ ತಡೆಯೋ ಬಗ್ಗೆ ಸ್ಕೆಚ್ ಹಾಕುತ್ತಿದ್ದಾರೆ. ಆಪರೇಷನ್ ಆಗುತ್ತಾ ಅಥವಾ ಕೌಂಟರ್ ಆಪರೇಷನ್ ನಡೆಯುತ್ತಾ ಅನ್ನೋದು ಸದ್ಯ ರಾಜ್ಯ ರಾಜಕೀಯದ ಕುತೂಹಲ.

ಈ ಮಧ್ಯೆ ಆಪರೇಷನ್ ಕಮಲ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ, ‘ಆಪರೇಷನ್​ ಕಮಲ ನಡೆಯುತ್ತಿರುವುದು ನಿಜ, ಆದರೆ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರ ಬೀಳುವ ರೀತಿ ಇದಿದ್ದರೆ ನಾನೂ‌ ಇಷ್ಟು ಕೂಲಾಗಿ ಇರುತ್ತಿದ್ದೇನಾ. ಸರ್ಕಾರ ಸುಭದ್ರವಾಗಿದೆ. ಯಾವುದೇ ಆತಂಕವಿಲ್ಲ’ ಎಂದಿದ್ದಾರೆ.

Leave a Reply