ಆಪರೇಷನ್ ಸಕಸ್ಸ್ ಆಗುತ್ತಾ ಫೇಲ್ ಆಗುತ್ತಾ..?

ಡಿಜಿಟಲ್ ಕನ್ನಡ ಟೀಮ್

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆಳ್ವಿಕೆ ಮಾಡ್ತಿರೋ ಮೈತ್ರಿ ಸರ್ಕಾರವನ್ನು ಉರುಳಿಸಿ, ತಾವೂ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನ ಅರಂಭಿಸಿದೆ. ರಮೇಶ್ ಜಾರಕಿಹೊಳಿ ಅಂಡ್ ಟೀ‌ಂ ಈಗಾಗಲೇ ಮುಂಬೈನ ಪಂಚತಾರ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದು, ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಹಾಗೂ ಬಿಜೆಪಿಯ ಮತ್ತೋರ್ವ ಶಾಸಕ ಬಾಲಚಂದ್ರ ಜಾರಕಿಹೊಳಿ ಬಂಡಾಯ ಶಾಸಕರ ಉಸ್ತುವಾರಿಗೆ ನಿಂತಿದ್ದಾರೆ.

ಅತ್ತ ಸಂಸತ್ ಚುನಾವಣಾ ತಯಾರಿ ನೆಪದಲ್ಲಿ ದೆಹಲಿ ಸೇರಿದ್ದ ಬಿಜೆಪಿ ಶಾಸಕರ ಸೈನ್ಯ ಹರಿಯಾಣದ ಗುರುಗ್ರಾಮದ ಐಶಾರಾಮಿ ರೆಸಾರ್ಟ್ ಸೇರಿಕೊಂಡಿದ್ದಾರೆ. ಎಲ್ಲೂ ಗುಟ್ಟು ಬಿಟ್ಟುಕೊಡದ ಬಿಜೆಪಿ ನಾಯಕರು ಒಳಗೊಳಗೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಮಾಜಿ ಸಚಿವ ಆರ್. ಶಂಕರ್ ಈಗಾಗಲೇ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದು, ನಾಳೆ ಅಂತಿಮವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಅಧಿಕೃತವಾಗಿ ಬೆಂಬಲ ವಾಪಸ್ ಪಡೆಯುವ ಪತ್ರ ನೀಡಲಿದ್ದಾರೆ ಎನ್ನಲಾಗಿದೆ.

ಈ ಬಾರಿ ಬಿಜೆಪಿ ತನ್ನ ಯೋಜನೆಯನ್ನು ಕೊಂಚ ಬದಲಾವಣೆ ಮಾಡಿಕೊಂಡಿದೆ. ಈ ಬಾರಿ ಆಪರೇಷನ್ ಕಮಲ ಹೊಣೆಗಾರಿಕೆಯನ್ನು ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಹಾಗೂ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದಾರೆ. ಕಳೆದ ಬಾರಿ ಗಣಿಧಣಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನೇತೃತ್ವ ವಹಿಸಿ ಹಿನ್ನಡೆ ಅನುಭವಿಸಿದ್ದರು. ಜೊತೆಗೆ ಬೆಂಗಳೂರಿನ ಸಾಮ್ರಾಟ್ ಆರ್ ಅಶೋಕ್ ಆಗಾಗ್ಗೆ ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ರು. ಈ ಬಾರಿ ಗೌಪ್ಯವಾಗಿ ಯೋಜನೆ ರೂಪಿಸಿರುವ ಬಿ.ಎಸ್ ಯಡಿಯೂರಪ್ಪ, ಕೇವಲ ಆತ್ಮೀಯರನ್ನು ಮಾತ್ರ ಮುಂದೆ ಬಿಟ್ಟಿದ್ದಾರೆ. ಇನ್ನು ಬೇರೆಲ್ಲಾ ನಾಯಕರನ್ನು ಆಪರೇಷನ್ ಕಮಲದಿಂದ ದೂರ ಇಟ್ಟಿದ್ದಾರೆ. ಹೀಗಾಗಿ ಆಪರೇಷನ್ ಸಕ್ಸಸ್ ಆಗಲಿದೆ ಅನ್ನೋ ಲೆಕ್ಕಾಚಾರದಲ್ಲಿ ಕಮಲಪಡೆ ಇದೆ.

ಆದ್ರೀಗ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆದು ರಾಜೀನಾಮೆ ಕೊಡಿಸುವಲ್ಲಿ ಸಫಲರಾದರೆ ಕಾಂಗ್ರೆಸ್ ಕೂಡ ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸಲು ಕಸರತ್ತು ನಡೆಸಿದೆ. ಅದೇ ಕಾರಣಕ್ಕಾಗಿಯೇ ಒಂದು ಟೀಂ ರಚನೆ ಮಾಡಲು ಮುಂದಾಗಿದ್ದು, ಕಾಂಗ್ರೆಸ್ ಶಾಸಕರನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ಯತ್ನಿಸೋದು, ಜೊತೆಗೆ ಬಿಜೆಪಿ ಶಾಸಕರು ಯಾರು ಬರುತ್ತಾರೆ ಅನ್ನೋದನ್ನು ಗುರ್ತಿಸಿ, ಕೆಲವೊಂದು‌ ಅಧಿಕಾರದ ಆಸೆಯುಟ್ಟಿಸಿ ರಾಜೀನಾಮೆ ಕೊಡಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಅದರಲ್ಲೂ ಈ ಹಿಂದೆ ಕಾಂಗ್ರೆಸ್ ಹಾಗೂ ಜನತಾದಳದಲ್ಲಿ ಗುರುತಿಸಿಕೊಂಡು ಇದೀಗ ಕಮಲ ಹಿಡಿದಿರುವ ನಾಯಕರನ್ನ ಸೆರೆ ಹಿಡಿಯಲು ಯೋಜನೆ ಸಿದ್ಧವಾಗಿದೆ. ಸಿಎಂ ಕುಮಾರಸ್ವಾಮಿ ಮಾತ್ರ ಸರ್ಕಾರಕ್ಕೆ ಏನೂ ಆಗಲ್ಲ ಎಂಬ ವಿಶ್ವಾಸದಲ್ಲಿದ್ದು, ಜಾಲಿಯಾಗಿ ಸಿನಿಮಾ ಮೇಕಿಂಗ್ ನೋಡ್ತಿದ್ದಾರೆ. ಕಾಂಗ್ರೆಸ್ ಯೋಜನೆ ಹಾಗೂ ಸಿಎಂ ಅವರ ವಿಶ್ವಾಸ ನೋಡಿದ್ರೆ ಸರ್ಕಾರ ಬೀಳುವುದು ಕಷ್ಟ ಸಾಧ್ಯವಿದೆ ಅನ್ನೋ ಮಾತುಗಳೂ ಕೇಳಿಬಂದಿವೆ.

Leave a Reply