ನಿಜವಾಗ್ಲೂ ಆಪರೇಷನ್ ಯಾರಿಗೆ?

ಡಿಜಿಟಲ್ ಕನ್ನಡ ಟೀಮ್

ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೊದಲು ಸರ್ಕಾರ ರಚನೆ ಮಾಡಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಅಧಿಕಾರವನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಕ್ಕೆ ಕಂಟಕ ಪ್ರಾಯರಾಗಿದ್ದಾರೆ ಅನ್ನೋದು ಮೈತ್ರಿ ಸರ್ಕಾರದ ಆರೋಪ. ಕೆಲವೊಮ್ಮೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಿರೋದು ಸುಳ್ಳೇನು ಅಲ್ಲ. ಈಗಲೂ ಬಿಜೆಪಿ ರೆಸಾರ್ಟ್ ರಾಜಕಾರಣ ಶುರು ಮಾಡಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ರೆಸಾರ್ಟ್ ರಾಜಕಾರಣ ಮಾಡೋದನ್ನು ಇಲ್ಲೀವರೆಗೆ ಜನ ನೋಡಿದ್ರು. ಆದ್ರೀಗ ಸಂಸತ್ ಚುನಾವಣಾ ತಯಾರಿ ನೆಪದಲ್ಲಿ ತನ್ನೆಲ್ಲಾ ಶಾಸಕರನ್ನು ದೆಹಲಿಯಲ್ಲಿ ಸೆರೆಯಿಡಿದ ಬಿಜೆಪಿ, ಎಲ್ಲರನ್ನು ದೆಹಲಿ ಸಮೀಪದ ಗುರುಗ್ರಾಮದ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ.

ಸರ್ಕಾರದಲ್ಲಿ ಅಸಮಾಧಾನಗೊಂಡ ಶಾಸಕರನ್ನು ವಿರೋಧ ಪಕ್ಷ ಸೆಳೆದು ಸರ್ಕಾರವನ್ನು ಉರುಳಿಸೋದು ಇಲ್ಲಿ ತನಕ ನಡೆದುಕೊಂಡು ಬಂದ ರಾಜಕಾರಣ. ಆದರೆ ಇದೀಗ ಬಿಜೆಪಿ ತನ್ನ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಮೂಲಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆರಂಭಿಸಿದೆ. ಸರಕಾರ ತನ್ನ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದು, ಸರ್ಕಾರದಿಂದ ನಡೆಯಬಹುದಾದ ಕುದುರೇ ವ್ಯಾಪಾರ ತಪ್ಪಿಸಲು‌ ನಾವು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದೇವೆ ಎಂದು ಸಮರ್ಥಿಸಿಕೊಂಡಿದೆ. ವಿಷಯ ಅಂದ್ರೆ ಬಿಜೆಪಿಗೆ ತನ್ನ ಶಾಸಕರ ಮೇಲೆ ಅಪನಂಬಿಕೆ ಮೂಡಿದ್ದು, ಆಪರೇಷನ್ ಕಮಲ ಆತಂಭಿಸಿದ್ರೆ, ಕಾಂಗ್ರೆಸ್, ಜೆಡಿಎಸ್ ನಾಯಕರೂ ಕೂಡ ಬಿಜೆಪಿ ಶಾಸಕರನ್ನು ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಕಾಂಗ್ರೆಸ್‌ನಿಂದ ಐದಾರು ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎನ್ನಲಾಗಿದ್ದು, ತನ್ನ ಶಾಸಕರನ್ನು ಮೊದಲು ಸಭದ್ರವಾಗಿ ಕಾಪಾಡಿಕೊಂಡು ಸರ್ಕಾರ ಉರುಳಿಸುವ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ ಅನ್ನೋ ಮಾಹಿತಿ ಇದೆ.

ರಾಜ್ಯ ಸರ್ಕಾರಕ್ಕೆ ಇಲ್ಲೀವರೆಗೂ ನೆಮ್ಮದಿಯ ಆಡಳಿತ ಅನ್ನೋದು ಸಿಕ್ಕಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಎಂದು ಘೋಷಣೆ ಮಾಡಿದ್ದ ಕುಮಾರಸ್ವಾಮಿ, ಮೈತ್ರಿಕೂಟದಲ್ಲಿ ಸಿಎಂ ಆದರೂ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ನಾಲ್ಕು ಹಂತದಲ್ಲಿ ಸಾಲಮನ್ನಾ ಮಾಡಲು ನಿರ್ಧರಿಸಿ, ನಂತರ ಒಂದೇ ಬಾರಿಗೆ ಸಾಲಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಬಿಜೆಪಿ, ಸರ್ಕಾರವನ್ನು ಅಸ್ಥಿರಗೊಳಿಸಿ ಮತದಾರನ ಕೆಂಗಣ್ಣಿಗೆ ಗುರಿಯಾಗುತ್ತಾ ಅನ್ನೋ ಅನುಮಾನದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದಾಕ್ಷಣ ರಾಜೀನಾಮೆ ಕೊಟ್ಟು ಬೇರೊಂದು ಪಕ್ಷದಿಂದ ಸ್ಫರ್ಧೆ ಮಾಡುವ ಅಧಿಕಾರ ಕೊಟ್ಟವರು ಯಾರು ಅನ್ನೋ ಪ್ರಶ್ನೆಯನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ. ಈ ರಾಜಕೀಯ ಮೇಲಾಟ ರಾಜ್ಯದ ಜನರಿಗಾಗಿ ಅಲ್ಲ. ಕೇವಲ ಅಧಿಕಾರ ದಾಹದಿಂದ ನಡೆಯುತ್ತಿರೋದು ಅನ್ನೋದನ್ನು ಅರ್ಥ ಮಾಡಿದ್ರೆ ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಗವ ಸಾಧ್ಯತೆ ದಟ್ಟವಾಗಿದೆ. ಅಧಿಕಾರ ದಾಹದಿಂದ ರಾಜ್ಯ ಸರ್ಕಾರ ಬೀಳಿಸಿದ್ರೆ ಲೋಕಸಭೆಯಲ್ಲಿ ಹೊಡೆತ ಬೀಳುತ್ತಾ ಅನ್ನೋ ಮಾತುಗಳೂ ಕೇಳಿ ಬರುತ್ತಿದೆ. ಇದಕ್ಕೆಲ್ಲ ಬಿಜೆಪಿ ರಾಷ್ಟ್ರೀಯ ನಾಯಕರು ಅದ್ಯಾವ ಧೈರ್ಯದ ಮೇಲೆ ಈ ಕಸರತ್ತಿಗೆ ಮುಂದಾಗಲು ರಾಜ್ಯ ನಾಯಕರಿಗೆ ಅನುಮತಿ ನೀಡಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.

Leave a Reply