ಕುಮಾರಸ್ವಾಮಿ ಟೆನ್ಷನ್ ಫ್ರೀಯಾಗಿ ಇರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್

ಬಿಜೆಪಿ ಆಪರೇಷನ್ ಕಮಲ ಮಾಡುವ ಮುನ್ನವೇ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಸೆರೆ ಹಿಡಿದು ಸರ್ಕಾರ ಉರುಳಿಸುವ ದಾಳ ಉರುಳಿಸಿದೆ. ಪಕ್ಷೇತರ ಶಾಸಕರಿಬ್ಬರು ಈಗಾಗಲೇ ಬೆಂಬಲ ವಾಪಸ್ ಪಡೆದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ನಾಳೆ ಕಾಂಗ್ರೆಸ್‌ನ ಮತ್ತಷ್ಟು ಶಾಸಕರು ರಾಜೀನಾಮೆ ಕೊಡ್ತಾರೆ ಅನ್ನೋ ಮಾಹಿತಿ ಮಾಧ್ಯಮಗಳಲ್ಲಿ ಅಬ್ಬರಿಸ್ತಿದೆ. ಆದ್ರೆ ಸಿಎಂ ಕುಮಾರಸ್ವಾಮಿ ಮಾತ್ರ ಬೆಳಗ್ಗೆಯಿಂದ ಎಷ್ಟು ಆರಾಮಾಗಿ ಇದ್ದರೋ ಅಷ್ಟೇ ಸಮಾಧಾನವಾಗಿ ಸಂಜೆ ಬಳಿಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಎಡಿಟಿಂಗ್ ವೀಕ್ಷಣೆ ಮಾಡಿದ್ರು. ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ತಲೆಬಿಸಿ ಮಾಡಿಕೊಂಡು ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದ್ರೆ ಸಿಎಂ ಕುಮಾರಸ್ವಾಮಿ ಮಾತ್ರ ಇದ್ಯಾವುದು ನನಗೆ ಸಂಬಂಧಿಸಿದ ವಿಚಾರವಲ್ಲ ಅನ್ನೋ ರೀತಿ ತುಂಬಾ ಸಾವಧಾನವಾಗಿ ನಡೆದುಕೊಳ್ತಿರೋದು ನೋಡಿದ್ರೆ, ಸಿಎಂ ಇಷ್ಟೊಂದು ಟೆನ್ಷನ್ ಮ್ಯಾಟರ್ ಅನ್ನು ಇಷ್ಟೊಂದು ಕೇರ್ ಲೆಸ್ ಆಗಿ ನೋಡಲು ಹೇಗೆ ಸಾಧ್ಯ ಅನ್ನೋ ಬಗ್ಗೆ ಮಾತನಾಡ್ತಿದ್ದಾರೆ.

ಜನರ ಮನಸ್ಸಲ್ಲಿ ಉಂಟಾಗಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಸಂಜೆ ಮಾಜಿ‌ ಪ್ರಧಾನಿ ಹೆಚ್‌ ಡಿ ದೇವೇಗೌಡರನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ, ಬಿಜೆಪಿ ಆಪರೇಷನ್ ಕಮಲದ ಬೆಳವಣಿಗೆ ಬಗ್ಗೆ ಮಾಹಿತಿ ಕೊಟ್ಟರು. ಈ ವೇಳೆ ಗೌಡರ ನಿವಾಸಕ್ಕೆ ಭೇಟಿ ನೀಡಿದ ಸಚಿವ ಸಾರಾ ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಹೆಚ್‌ಡಿಡಿ ಹಾಗೂ ಹೆಚ್‌ಡಿಕೆ ಭೇಟಿ ಮಾಡಿ ಚರ್ಚಿಸಿದ ಬಳಿಕ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಬಿಜೆಪಿಯ 6 ಮಂದಿ ಶಾಸಕರು ಜೆಡಿಎಸ್ ಸಂಪರ್ಕದಲ್ಲಿದ್ದಾರೆ, ಒಂದು ಬಾರಿ ಬಿಜೆಪಿ ಶಾಸಕರು ಹೋಟೆಲ್‌ನಿಂದ ಬಿಡುಗಡೆ ಆದರೆ, ಆಗ ಜೆಡಿಎಸ್ ಸಂಪರ್ಕದಲ್ಲಿರುವ ಆ ಶಾಸಕರು ಯಾರೆಂದು ಗೊತ್ತಾಗುತ್ತದೆ. ಬಳಿಕ ನಮ್ಮ ಆಟ ಶುರುವಾಗತ್ತೆ ಎಂದಿದ್ದಾರೆ. ದೇವೇಗೌಡರು ರಾಜಕೀಯ ಶುರುಮಾಡಿದ ಮೇಲೆ ಇವರೆಲ್ಲಾ ರಾಜಕೀಯ ಆರಂಭಿಸಿದವರು. ಹಾಗಾಗಿ ನಮಗೂ ಗೊತ್ತು ರಾಜಕಾರಣದಲ್ಲಿ ಏನು ಮಾಡಬೇಕೆಂದು. ನಾವೇನು ಅವರಂತೆ ರಾಜಕೀಯ ಮಾಡಲ್ಲ. ರಮೇಶ್ ಜಾರಕಿಹೊಳಿ ನಮ್ಮ ಪರವಾಗಿಯೇ ಬಿಜೆಪಿ ಬಳಿ ಹೋಗಿರಬಹುದು. ಮುಂದೆ ಏನಾಗುತ್ತೆ ಎಂದು ಕಾದು ನೋಡಿ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಇನ್ನೂ ಬಿಜೆಪಿಯವರ ಸಂಪರ್ಕದಲ್ಲಿ ಆರೆಂಟು ಶಾಸಕರೂ ಇಲ್ಲ. ಪಕ್ಷೇತರರು ಇಬ್ಬರು ಸೇರಿ ಮೂರ್ನಾಲ್ಕು ಶಾಸಕರು ಇದ್ದಿರಬಹುದು. ಎಲ್ಲವೂ ನಾಳೆ ಬಹಿರಂಗ ಆಗುತ್ತೆ. ಕಾಂಗ್ರೆಸ್‌ನ ಶಾಸಕರು ಯಾರೂ ರಾಜೀನಾಮೆ ಕೊಡಲ್ಲ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರೇ ರಾಜೀನಾಮೆ ಕೊಟ್ಟರೂ ಕೊಡಬಹುದು. ಜೆಡಿಎಸ್ ಪಕ್ಷದ ಶಾಸಕರು ಒಗ್ಗಟ್ಟಾಗಿದ್ದಾರೆ. ಸರ್ಕಾರ ಉಳಿಸಲು ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿದ್ದಾರೆ. ಸಚಿವ ಸಾ ರಾ ಮಹೇಶ್ ಹೇಳಿಕೆಗೆ ಬಲವಾದ ಕಾರಣವಿದೆ ಅನ್ನೋದು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.

ವಿಷಯ ಏನಪ್ಪ ಅಂದ್ರೆ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದರೂ ಅವರಿಗೆ ಕಾಂಗ್ರೆಸ್ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸ ಇರಲಿಲ್ಲ. ಯಾವಾಗ ಬೇಕಿದ್ದರೂ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಸೇರಿ ಸರ್ಕಾರ ಉರುಳಿಸಬಹುದು ಎಂದು ಅಂದಾಜಿಸಲಾಗಿತ್ತು. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಕೆಲವು ಶಾಸರನ್ನು ಆಯ್ಕೆ ಮಾಡಿ ಅವರಿಗೆ ಅನುದಾನ, ಅವರ ಇಚ್ಛೆಯಂತೆ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ಸಹಾಯವನ್ನು ಮಾಡಿಕೊಟ್ಟಿದ್ದು, ಯಾವಾಗಲಾದರೂ ಸರ್ಕಾರಕ್ಕೆ ತೊಂದರೆ ಆದರೆ ಸೂಚನೆ ಸಿಕ್ಕ ಕೂಡಲೇ ನೇರವಾಗಿ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಹೊರಬನ್ನಿ, ಮತ್ತೆ ನಾವು ನಿಮ್ಮನ್ನು ಆಯ್ಕೆ ಮಾಡಿಕೊಂಡು ಶಾಸಕರನ್ನಾಗಿ ಮಾಡಿ, ಉತ್ತಮ ರೀತಿಯಲ್ಲಿ ನಡೆಸಿಕೊಳ್ತೇವೆ. ಆದರೆ ಯಾವುದೇ ಕಾರಣಕ್ಕೂ ಮೊದಲೇ ಈ ವಿಚಾರ ಬಹಿರಂಗ ಆಗುವುದು ಬೇಡ ಎಂದು ಒಬ್ಬೊಬ್ಬರೇ ಶಾಸಕರ ಬಳಿ ಮುಖಾಮುಖಿಯಾಗಿ ಮಾತಿನ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಬಿಜೆಪಿ ನಾಯಕರು ಒಂದು ದಾಳ ಉರುಳಿಸಿದರೆ ಕಮಲದ ಪಕಳೆಗಳು ಒಂದೊಂದೇ ತನ್ನ ಪಾಡಿಗೆ ಉದುರಲು ಆರಂಭ ಆಗಲಿದೆ ಎನ್ನಲಾಗ್ತಿದೆ.

ಇದೇ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಕೂಡ ಯಾವುದೇ ಬಂಡಾಯಕ್ಕೂ ಬೆದರದೆ ಆರಾಮಾಗಿ ಸಂಕ್ರಾಂತಿ ಆಚರಣೆ ಮಾಡ್ತಿದ್ದಾರೆ. ಸಿಎಂ ದಾಳ ಗೊತ್ತಿಲ್ಲದ ಕಾಂಗ್ರೆಸ್ ಮಾತ್ರ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಮಾಡ್ತಿದೆ ಎನ್ನಲಾಗ್ತಿದೆ. ಈಗಾಗಲೇ ಬಿಜೆಪಿ ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್ ಪಡೆಯುವ ಹೇಳಿಕೆ ಕೊಡಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಪ್ರಹಸನ ಆರಂಭವಾದರೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಅಂಗೀಕಾರ ಆಗುವ ಮೊದಲು ಬಿಜೆಪಿ ಶಾಸಕರ ರಾಜೀನಾಮೆ ಅಂಗೀಕಾರ ಆಗುತ್ತದೆ ಎನ್ನುವ ಮಾತುಗಳನ್ನ ಸಚಿವ ಸಾ ರಾ ಮಹೇಶ್ ಈ ರೀತಿ ವ್ಯಕ್ತಪಡಿಸಿದ್ದಾರೆ.

Leave a Reply