‘ಆಪರೇಷನ್ ಕಮಲ’ ನಂಬಿ ಕೆಟ್ಟವರು ಯಾರ‌್ಯಾರು..?

ಡಿಜಿಟಲ್ ಕನ್ನಡ ಟೀಮ್:

ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಗಳು ನಡೆದಾಗ ಸ್ಥಳೀಯವಾಗಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಆ ಪಕ್ಷಕ್ಕೆ ಕೊಂಚಮಟ್ಟಿಗೆ ಸಹಾಯವಾಗೋದು ಸಹಜ. ಅಧಿಕಾರದಲ್ಲಿದ್ದ ಪಕ್ಷವನ್ನು ಗೆಲ್ಲಿಸಿಯೇ ಬಿಡ್ತಾರೆ ಎಂದು ಹೇಳೋಕೆ ಆಗದಿದ್ರು ಕೆಲವೊಂದು ಕಡೆ ಮತದಾರ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಬೆಂಬಲ ಕೊಡ್ತಾನೆ ಹಾಗೂ ಕೆಲವೊಂದು ವಿಚಾರಗಳಲ್ಲೂ, ಚುನಾವಣೆ ಪ್ರಕ್ರಿಯೆಯಲ್ಲೂ ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಗೆ ಅನುಕೂಲ ಆಗುತ್ತದೆ. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯೊಳಗಾಗಿ ರಾಜ್ಯದಲ್ಲಿ ಅಧಿಕಾರ ನಮ್ಮ ಬಳಿ ಇರಬೇಕು ಅನ್ನೋದು ಬಿಜೆಪಿ ನಾಯಕರ ಒತ್ತಾಸೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರುಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ. ಈ ಆಪರೇಷನ್ ಕಮಲ ವಿಚಾರದಲ್ಲಿ ಮೂವರು ನಂಬಿ ಕೆಟ್ಟಿದ್ದಾರೆ. ಅದರಲ್ಲಿ ಪ್ರಮುಖರು ಅಂದ್ರೆ ಮಾಜಿ ಸಿಎಂ ಯಡಿಯೂರಪ್ಪ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಗೆ ಲೋಕಸಭಾ ಚುನಾವಣೆಯಲ್ಲಿ ಟಾರ್ಗೆಟ್ 22 ಕೊಡಲಾಗಿದೆ. ಈ ಟಾರ್ಗೆಟ್ ರೀಚ್ ಮಾಡಲು ಮಾಜಿ ಸಿಎಂ ಬಿಎಸ್‌ವೈ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಆಪರೇಷನ್ ಕಮಲ ಮಾಡ್ತಿರೋದು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕೆಲಸ ಮಾಡ್ತಿದ್ದಾರೆ. ಅದರಲ್ಲೂ ಅಧಿಕಾರ ಸಿಗದೆ ಅಸಮಾಧಾನ ಹೊಂದಿದ ಶಾಸಕರು ಕಮಲದ ಟಾರ್ಗೆಟ್. ರಮೇಶ್ ಜಾತಕಿಹೊಳಿ ಕಾಂಗ್ರೆಸ್ ಒಳಗಿನ ಕೆಲವೊಂದು ವಿಚಾರದಲ್ಲಿ ಬೇಸರಗೊಂಡು ಅಂತರ ಕಾಯ್ದುಕೊಳ್ಳುತ್ತಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಯಡಿಯೂರಪ್ಪ ಅಂಡ್ ಟೀಂ ಆಪರೇಷನ್ ಸ್ಟಾರ್ಟ್ ಮಾಡಿ ವಿಫಲವಾಗ್ತಿತ್ತು. ಕೊನೆಗೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶ್ ಅವರಿಗೆ ಸಚಿವ ಸ್ಥಾನ ಕೊಟ್ಟ ಬಳಿಕ ರಮೇಶ್ ಸಂಪೂರ್ಣವಾಗಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಲು ನಿಂತಿದ್ದು, ಈ ಬಾರಿ ಸರ್ಕಾರ ಬೀಳಿಸಿಯೇ ಬೀಳಿಸೋಣ ಎಂದು ಬಿಎಸ್‌ವೈಗೆ ಹೇಳಿರಬೇಕು. ಅವರ ಮಾತನ್ನು ನಂಬಿದ ಯಡಿಯೂರಪ್ಪ ಆಪರೇಷನ್ ಯಶಸ್ಸು ಕಾಣದೆ ಕಂಗಾಲಾಗಿದ್ದಾರೆ.

ರಮೇಶ್ ಜಾತಕಿಹೊಳಿ ಅಂಡ್ ಟೀಂ ( ಮೂರ್ನಾಲ್ಕು ಜನ ) ಹೇಳಿದ ಮಾತನ್ನೇ ನಂಬಿದ ಯಡಿಯೂರಪ್ಪ ಈ ಬಾರಿ ರಾಜ್ಯದಲ್ಲಿ ಆಪರೇಟ್ ಮಾಡೋದು ಬೇಡ. ದೆಹಲಿಯಲ್ಲೇ ಮಾಡೋಣ ಎಂದು ಹೈಕಮಾಂಡ್ ಬಳಿ ತಿಳಿಸಿ, ಅದಕ್ಕೊಂದು ವೇದಿಕೆ ಸೃಷ್ಟಿಸಿದ್ರು. ಅದುವೇ ಸಂಸತ್ ಚುನಾವಣಾ ತಯಾರಿ ಸಭೆ‌. ಸಂಸತ್ ಚುನಾವಣಾ ತಯಾರಿ ಸಭೆ ಹೆಸರಲ್ಲಿ ಎಲ್ಲಾ ಶಾಸಕರನ್ನು ದೆಹಲಿಗೆ ರವಾನಿಸಿದ್ರು. ಅಲ್ಲಿ ರಾಷ್ಟ್ರೀಯ ನಾಯಕರನ್ನು ಕರೆತಂದು ಒಂದೆರಡು ಭಾಷಣಗಳನ್ನು ಮಾಡಿಸಿದ್ರು. ನಂತರ ಆಪರೇಷನ್ ಕಮಲದ ಬಗ್ಗೆ ಮಾಹಿತಿ ಕೊಟ್ಟು, ಈ ಬಾರಿ ಆಪರೇಷನ್ ಕಮಲ ಯಶಸ್ವಿಯಾಗುತ್ತದೆ. ನಾವು ಸರ್ಕಾರ ರಚನೆ ಮಾಡ್ತೇವೆ ಮಾಡ್ತೇವೆ ಎಂದು ತಿಳಿಸಿದ್ರು. ಆ ಬಳಿಕ ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರಕ್ಕೆ ಅತೃಪ್ತ ಶಾಸಕರು ಹಾಗೂ ಹರಿಯಾಣಕ್ಕೆ ಬಿಜೆಪಿ ಶಾಸಕರನ್ನು ಶಿಫ್ಟ್ ಮಾಡುವ ನಿರ್ಧಾರ ಮಾಡಿದ್ರು. ಇಲ್ಲಿ ಬಿಜೆಪಿಯ ಕೇಂದ್ರ ನಾಯಕರೂ ಯಡಿಯೂರಪ್ಪ ಮಾತು ಕೇಳಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಖಭಂಗ ಮಾಡಿಕೊಂಡ್ರು.‌

ರಮೇಶ್ ಜಾರಕಿಹೊಳಿ ತನ್ನ ಆಪ್ತ ಶಾಸಕರಿಗೆ ಈ ಬಾರಿ ಸರ್ಕಾರ ಬೀಳಿಸಿಯೇ ತೀರುತ್ತೇವೆ ಎಂದು ತಿಳಿಸಿದ್ರು. ಮೊದಲು ಪಟ್ಟಿ ಕೊಟ್ಟಾಗ ಸಾಕಷ್ಟು ಶಾಸಕರ ಹೆಸರಿತ್ತು. ಆ ಬಳಿಕ ಒಬ್ಬೊಬ್ಬರೇ ನಾವು ಮುಂಬೈಗೆ ಪ್ರಯಾಣ ಮಾಡೋಣ. ನಿಧಾನವಾಗಿ ಎಲ್ಲರೂ ಬಂದು ಸೇರಿಕೊಳ್ಳುತ್ತಾರೆ ಎಂದು ತಿಳಿಸಿದ್ರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತು ನಂಬಿದ ಮೂರ್ನಾಲ್ಕು ಶಾಸಕರು ಮುಂಬೈನತ್ತ ಪ್ರಯಾಣ ಮಾಡಿದ್ರು. ಇದೀಗ ಯಾವ ಶಾಸಕರು ಮುಂಬೈಗೆ ಬರಲಿಲ್ಲ. ಅಸಮಾಧಾನ ಹೊಂದಿದ್ದ ಶಾಸಕರನ್ನು ಸಮಾಧಾನ ಮಾಡುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ. ರಮೇಶ್ ಜಾರಕಿಹೊಳಿ ಮಾತು ನಂಬಿ ಮುಂಬೈಗೆ ಹೋದ ಶಾಸಕರೂ ಅತಂತ್ರರಾಗಿದ್ದಾರೆ. ಒಟ್ಟಾರೆ ಇದೀಗ ಆಪರೇಷನ್ ಫೇಲ್ ಆಗುವ ಮಟ್ಟ ತಲುಪಿದ್ದು, ರಮೇಶ್ ಜಾರಕಿಹೊಳಿ ಮಾತಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಹಾಗೂ ಕಾಂಗ್ರೆಸ್‌ನ ಕೆಲವು ಶಾಸಕರು ಮುಖಭಂಗ ಅನುಭವಿಸಿದ್ದಾರೆ.

Leave a Reply