ಸಿಎಲ್ ಪಿ ಸಭೆಗೆ ನಾಲ್ವರು ಗೈರು? ಆಗ್ತಾರಾ ಅಮಾನತು?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲಕ್ಕೆ ಪ್ರತಿತಂತ್ರವಾಗಿ ನಡೆಸಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸಕರು ಬಹುತೇಕ ಗೈರಾಗಿದ್ದು, ಈ ನಾಲ್ವರ ವಿರುದ್ಧ ಪಕ್ಷ ಅಮಾನತು ಶಿಕ್ಷೆ ನೀಡುವುದೇ ಎಂಬ ಕುತೂಹಲ ಹುಟ್ಟಿಕೊಂಡಿದೆ.

ಹೆಚ್.ಕೆ ಪಾಟೀಲ್ ಅವರು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಸಿಎಲ್ ಪಿ ಸಭೆ 4.30 ಆದರೂ ಆರಂಭವಾಗಲಿಲ್ಲ. ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನಿಗದಿತ ಸಮಯಕ್ಕೆ ವಿಧಾನ ಸೌಧಕ್ಕೆ ಬರಲು ಸಾಧ್ಯವಾಗಲಿಲ್ಲ. ಇನ್ನು ಬಿ.ಸಿ ಪಾಟೀಲ್ ಅವರು ಮಗಳ ಮದುವೆ ಮುಗಿಸಿ ಬರಬೇಕಾದ ಹಿನ್ನೆಲೆಯಲ್ಲಿ ತಡವಾಗಿ ಆಗಮಿಸಿದರು.

ವಿಪ್ ಜಾರಿ ಮಾಡಿದ್ದರೂ ಸಿಎಲ್ ಪಿ ಸಭೆಗೆ ಅತೃಪ್ತ ಶಾಸಕರುಗಳಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಅವರು ಸಭೆಯತ್ತ ಸುಳಿಯಲ್ಲ. ಹೀಗಾಗಿ ಈ ನಾಲ್ವರು ಸಭೆಗೆ ಗೈರಾಗುವುದು ಖಚಿತ. ಇದರಲ್ಲಿ ಉಮೇಶ್ ಜಾಧವ್ ಅವರು ಸಿದ್ದರಾಮಯ್ಯ ಅವರಿಗೆ ಫ್ಯಾಕ್ಸ್ ಮೂಲಕ ಪತ್ರ ರವಾನಿಸಲಾಗಿದ್ದು, ಅದರಲ್ಲಿ ವೈಯಕ್ತಿಕ ಕಾರಣ ನೀಡಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿರುವುದಾಗಿ ವರದಿ ಬಂದಿವೆ. ಇನ್ನು ನಾಗೇಂದ್ರ ಅವರು ನ್ಯಾಯಾಲಯದ ವಿಚಾರಣೆ ಕಾರಣ ನೀಡಿದ್ದರಾದರೂ ಅವರು ವಿಚಾರಣೆಗೂ ಹಾಜರಾಗಿಲ್ಲ ಹಾಗೂ ಸಭೆಗೂ ಬಂದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಈ ಸಭೆ ಕರೆಯುವಾಗ ಸಭೆಗೆ ಹಾಜರಾಗದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಈ ನಾಲ್ವರು ಶಾಸಕರಲ್ಲಿ ಕಾಂಗ್ರೆಸ್ ಯಾರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕುತೂಹಲ ಮೂಡಿದೆ.

Leave a Reply