ಟೀಮ್ ಇಂಡಿಯಾ ತೆಕ್ಕೆಗೆ ಏಕದಿನ ಸರಣಿ, ನಾಲ್ಕು ವರ್ಷದ ಸಮಸ್ಯೆಗೆ ಪರಿಹಾರವಾದ್ರಾ ಧೋನಿ?

ಡಿಜಿಟಲ್ ಕನ್ನಡ ಟೀಮ್:

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಮತ್ತೊಂದು ಭರ್ಜರಿ ಸರಣಿ ಜಯ ಸಾಧಿಸಿದ್ದು, ಭಾರತ ತಂಡ ಮೂರು ಸರಣಿಯಲ್ಲಿ 2ರಲ್ಲಿ ಜಯ ಹಾಗೂ 1 ಸರಣಿಯಲ್ಲಿ ಡ್ರಾ ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಮೂರು ಸರಣಿಗಳ ಪೈಕಿ ಒಂದರಲ್ಲೂ ಜಯ ಗಳಿಸದೇ ತೀವ್ರ ಮುಖಭಂಗ ಅನುಭವಿಸಿದೆ.

ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಬೀಗಿದ ಟೀಮ್ ಇಂಡಿಯಾ, ಏಕದಿನ ಸರಣಿಯನ್ನು ಆತ್ಮ ವಿಶ್ವಾಸದಿಂದ ಎದುರಿಸಿತ್ತು. ಆದರೆ ಮೊದಲ ಪಂದ್ಯದಲ್ಲಿ ತಂಡ ಸೋಲನುಭವಿಸಿದರೂ ನಂತರದ ಎರಡೂ ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ನೀಡಿ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಈ ಸರಣಿಯಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು, ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್. ಕೀಪಿಂಗ್ ನಲ್ಲಿ ಪರಿಣಾಮಕಾರಿಯಾಗಿದ್ದರೂ ಬ್ಯಾಟಿಂಗ್ ಲಯ ಅವರ ಸ್ಥಾನವನ್ನು ಪ್ರಶ್ನಿಸುವಂತೆ ಮಾಡಿತ್ತು. ಈ ಸರಣಿಯಲ್ಲಿ ಧೋನಿ ಮೂರು ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸುವ ಮೂಲಕ ಟೀಕಾಕಾರರ ಬಾಯಿಗೆ ಬೀಗ ಜಡಿದಿದ್ದಾರೆ.

ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಟೀಮ್ ಇಂಡಿಯಾವನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಕೀಪರ್ ದಿನೇಶ್ ಕಾರ್ತಿಕ್ ಅವರ ಬದಲಿಗೆ ಧೋನಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯ್ತು. ಧೋನಿ ಅಜೇಯ 81 ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದ್ದಾರೆ. ಅದರೊಂದಿಗೆ ಧೋನಿ ಮತ್ತೊಮ್ಮೆ ಬೆಸ್ಟ್ ಫಿನಿಶರ್ ಎಂದು ಸಾಬೀತು ಪಡಿಸಿದ್ದಾರೆ. ಇದು ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ದೊಡ್ಡ ನೆಮ್ಮದಿ ತಂದಿದೆ.

Leave a Reply