ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತಾರಾ..?

ಡಿಜಿಟಲ್ ಕನ್ನಡ ಟೀಮ್

ರಾಜ್ಯ ಸರ್ಕಾರದ ಸಚಿವರಾಗಿದ್ದಾಗಲೇ ಬಂಡಾಯ ಸಾರಿದ್ದ ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಸಚಿವ ಸಂಪುಟ ಸಭೆಗಳಿಂದ ದೂರು ಉಳಿಯುತ್ತಿದ್ದರು. ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಬಂಡಾಯ ಹೊರಟಿರುವ ರಮೇಶ್ ಜಾರಕಿಹೊಳಿ, ಕಳೆದೊಂದು ವಾರದಿಂದ ಮುಂಬೈನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ತನ್ನ ಆಪ್ತರ ಜೊತೆ ಕಾಣಿಸಿಕೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇಂದು ವಿಧಾನಸೌಧದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗ್ತಾರಾ ಅನ್ನೂ ಕೂತೂಹಲ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಅದಕ್ಕೂ ಮಿಗಿಲಾಗಿ ಶಾಸಕಾಂಗ ಸಭೆಗೂ ಮುನ್ನವೇ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗ್ತಾರಾ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ರಾಜೀನಾಮೆ ವಿಚಾರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳೂ ಕೂಡ ರಾಜಕೀಯ ವಲಯದ ಅಚ್ಚರಿಗೆ ಕಾರಣವಾಗಿದೆ.

ಇಷ್ಟುದಿನ ದೆಹಲಿ, ಹರಿಯಾಣದಲ್ಲಿ ಶಾಸಕರ ಜೊತೆ ರಾಜಕಾರಣ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಿನ್ನೆ ಸಿದ್ಧಗಂಗಾ ಶ್ರೀಗಳ ದರ್ಶನ ಪಡೆಯಲು ಬೆಂಗಳೂರಿಗೆ ವಾಪಸ್ಸಾಗಿದ್ರು. ತುಮಕೂರಿನ ಮಠದಲ್ಲಿ ಮಾತನಾಡಿದ ಬಿಎಸ್‌ವೈ ನಾವು ಆಪರೇಷನ್ ಮಾಡಲು ಹೋಗಿರಲಿಲ್ಲ, ಸಂಸತ್ ಚುನಾವಣೆಗೆ ನಮ್ಮ ಶಾಸಕರನ್ನು ಅಣಿಮಾಡುವ ಉದ್ದೇಶದಿಂದ ದೆಹಲಿಗೆ ಕರೆದುಕೊಂಡು ಹೋಗಿದ್ದೆವೆ ಎನ್ನುವ ಮೂಲಕ ಆಪರೇಷನ್ ಕಮಲ ಠುಸ್ ಆಯ್ತು ಅನ್ನೋದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಜೊತೆಗೆ ಇನ್ನೂ ಒಂದು ಮಾತು ಹೇಳಿದ್ರು. ಈ ಮಾತು ಕಾಂಗ್ರೆಸ್ ವಲಯದಲ್ಲಿ ಅಷ್ಟೇ ಅಲ್ಲದೆ ಇಡೀ ರಾಜಕೀಯ ರಂಗವೇ ಕುತೂಹಲದಿಂದ ಕಾಯುವಂತೆ ಮಾಡಿದೆ. ಕಾಂಗ್ರೆಸ್ ತನ್ನ ಶಾಸಕರನ್ಮು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ, ಬಿಜೆಪಿ ವಿರುದ್ಧ ಆರೋಪ ಮಾಡ್ತಿದೆ. ಶುಕ್ರವಾರ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಆ ಸಭೆಯಲ್ಲಿ ಅವರ ಬಂಡವಾಳ ಬಯಲಾಗಲಿದೆ ಎಂದಿದ್ದಾರೆ. ಅಂದರೆ ಆಪರೇಷನ್ ಕಮಲ ವಿಫಲ ಆದರೂ ಇನ್ನೂ ಯಾವುದೋ ಒಂದು ಅಚ್ಚರಿಯ ಬೆಳವಣಿಗೆ ಇದೆ ಅನ್ನೋದನ್ನು ಈ ಮೂಲಕ ಹೇಳಿದ್ದಾರೆ. ಇದು ರಮೇಶ್ ಜಾರಕಿಹೊಳಿ ಅಂಡ್ ಟೀಂ ರಾಜೀನಾಮೆಗೆ ಸಂಬಂಧಿಸಿದ ಮಾತು ಇರಬಹುದಾ ಅನ್ನೋ ಆತಂಕ ಕಾಂಗ್ರೆಸ್ ಪಾಳಯದ್ದು. ಈ ಮಾತಿಗೆ ಕೌಂಟರ್ ಎನ್ನುವಂತೆ ಸಿದ್ದರಾಮಯ್ಯ ಮಾತನಾಡಿರೋದು ಮತ್ತಷ್ಟು ಅಲರ್ಟ್ ಆಗುವಂತೆ ಮಾಡಿದೆ.

ತಮ್ಮ ಮತಕ್ಷೇತ್ರ ಬಾಗಲಕೋಟೆಯ ಬಾದಾಮಿಗೆ ಭೇಟಿ ಕೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅಲ್ಲಿಂದ ಬೆಳಗಾವಿಗೆ ತೆರಳಿ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ರು. ಅಲ್ಲಿ‌ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾನು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಕರೆದುಕೊಂಡು ಹೋಗಲು ಬೆಳಗಾವಿಗೆ ಬಂದಿಲ್ಲ, ಬದಲಿಗೆ ರಾತ್ರಿ ವಿಮಾನ ಸೌಕರ್ಯ ಇಲ್ಲದಿರುವ ಕಾರಣಕ್ಕೆ ಬೆಳಗಾವಿಯಲ್ಲಿ ಉಳಿದುಕೊಂಡಿದ್ದೇನೆ. ಒಂದು ವೇಳೆ ಬಂಡಾಯ ಎದ್ದಿರುವ ಶಾಸಕ ರಮೇಶ್ ಜಾರಕಿಹೊಳಿ ಸಿಕ್ಕಿದ್ರೆ ಮಾತನಾಡುತ್ತೇನೆ ಎಂದಿದ್ದಾರೆ. ಒಂದು ವೇಳೆ ಶಾಸಕಾಂಗ ಪಕ್ಷದ ಸಭೆಗೆ ಬಾರದೇ ಹೋದಲ್ಲಿ ಕಾನೂನು ಕ್ರಮ ಖಚಿತ ಎಂದಿರುವ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟು ಹೋಗಲು ಸ್ವತಂತ್ರರು ಎಂದಿದ್ದಾರೆ. ಒಟ್ಟಾರೆ ಇಂದಿನ ಶಾಸಕಾಂಗ ಸಭೆ, ಬಿಎಸ್ ಯಡಿಯೂರಪ್ಪ ಮಾತು, ಸಿದ್ದರಾಮಯ್ಯ ಕೊಟ್ಟಿರೋ ಖಡಕ್ ಹೇಳಿಕೆಗಳನ್ನು ನೋಡಿದ್ರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟು ಬಂಡಾಯಕ್ಕೆ ಇತಿಶ್ರೀ ಹಾಡ್ತಾರಾ ಅನ್ನೋ ಕುತೂಹಲ ಜೋರಾಗಿದೆ.

Leave a Reply