ಕಾಂಗ್ರೆಸ್ ರೆಸಾರ್ಟ್ ರಾಜಕಾರಣ.. ಆಪರೇಷನ್ ಸಕ್ಸಸ್..!?

ಡಿಜಿಟಲ್ ಕನ್ನಡ ಟೀಮ್:

ಕಳೆದೊಂದು ವಾರದಿಂದ ನಡೆಯುತ್ತಿದ್ದ ಆಪರೇಷನ್ ಕಮಲ ಒಂದು ಹಂತಕ್ಕೆ ಬಂದು ನಿಂತಿದೆ. ನಾಲ್ಕೈದು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಬಿಜೆಪಿ ಶಾಸಕರು ಆ ಬಳಿಕ ಹರಿಯಾಣದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ರು. ಇನ್ನೂ ಕಾಂಗ್ರೆಸ್‌ನಿಂದ ಬಂಡಾಯವೆದ್ದಿದ್ದ ಶಾಸಕರು ಮುಂಬೈನಲ್ಲಿ ವಾಸ್ತುವ್ಯ ಮಾಡಿದ್ರು. ಕಾಂಗ್ರೆಸ್ ಶಾಸಕರ ಜೊತೆ ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದ್ರಿಂದ ಬೆದರಿದ ಕಾಂಗ್ರೆಸ್ ಪಾಳಯ ಇಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆ ಬಳಿಕ ನಡೆದಿದ್ದೆಲ್ಲವೂ ಸಖತ್ ಹೈಡ್ರಾಮಾ. ಇದೆಲ್ಲವನ್ನು ನೋಡಿದ್ರೆ ಆಪರೇಷನ್ ಕಮಲ ಸಕ್ಸಸ್ ಆಗಿದ್ಯಾ ಎನಿಸುತ್ತಿದೆ.‌

ಕಾಂಗ್ರೆಸ್ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ವಿಪ್ ರವಾನೆ ಮಾಡಿದ್ರು. ಒಂದು ವೇಳೆ ಶಾಸಕಾಂಗ ಸಭೆಗೆ ಹಾಜರಾಗದೇ ಹೋದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ನಾಲ್ವರು ಶಾಸಕರು ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದಾರೆ. ಅದರಲ್ಲಿ‌ ಇಬ್ಬರು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಿದ್ರು. ಕೆಲವೊಂದು ಕಾರಣಗಳಿಂದಾಗಿ ಶಾಸಕಾಂಗ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಬಂಡಾಯ ಶಾಸಕರ ಲೀಡರ್ ಗೋಕಾಖ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಮಾತ್ರ ಪತ್ರವೂ ಇಲ್ಲ ಹಾಜರಿಯೂ ಇಲ್ಲ ಎನ್ನುವ ಹಾಗೆ ಬಂಡಾಯ ಸಾರೇ ಬಿಟ್ಟಿದ್ದಾರೆ. ಇದರ ಗುಟ್ಟು ಅರಿತ ಕಾಂಗ್ರೆಸ್ ನಾಯಕರು ಶಾಸಕಾಂಗ ಸಭೆಗೆ ಬಂದಿದ್ದ ಎಲ್ಲಾ ಶಾಸಕರನ್ನು ಬಾಸ್‌ನಲ್ಲಿ ಬಿಡದಿಯ ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ. ಇಲ್ಲೂ ಕೂಡ ಬಿಜೆಪಿಯ ಆಪರೇಷನ್ ಕಮಲ ವರ್ಕೌಟ್ ಆಗಿದೆ.

ಅತ್ತ ಗುರುಗ್ರಾಮದಲ್ಲಿ ಐಶಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಗುಪ್ತವಾಗಿ ಬೇರೊಂದು ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ. ದುಬಾರಿ ವೆಚ್ಚದ ಕಾರಣಕ್ಕೆ ಬೇರೆ ಕಡೆ ಶಿಫ್ಟ್ ಆಗಿದ್ದೇವೆ ಅನ್ನೋದನ್ನು ಬಿಜೆಪಿ ಹೇಳ್ತಿದೆ. ಆದ್ರೆ ಆಪರೇಷನ್ ಕಮಲಕ್ಕೆ ಕೌಂಟರ್ ಆಗಿ, ಮೈತ್ರಿ ಸರ್ಕಾರ ಕೂಡ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದು ಬಿಜೆಪಿ ಶಾಸಕರನ್ನು ಅಂಪರ್ಕಿಸಿರುವ ಅನುಮಾನ ಬಿಜೆಪಿ‌ನಾಯಕನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ಬೇರೊಂದು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಲು ರೆಡಿಯಾಗಿದ್ದವರು ಏಕಾಏಕಿ ಬೆಂಗಳೂರಿನ ಡಾಲೋನಿಯ ನಿವಾಸದಲ್ಲೇ ಉಳಿದು ಸಭೆ ಮೇಲೆ ಸಭೆ ನಡೆಸಿದ್ರು. ಕೊನೆಗೆ ಅಂತಿಮವಾಗಿ ನಾಳೆ ಶನಿವಾರ ಬಂಡಾಯ ಶಾಸಕರಿಂದ ರಾಜೀನಾಮೆ ಕೊಡಿಸ್ತಾರೆ ಅನ್ನೋ‌ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ನಾಲ್ಕು ಶಾಸಕರು ರಾಜೀನಾಮೆ ಕೊಟ್ಟರೂ ಯಾವುದೇ ಸಂಕಷ್ಟ ಬರೋದಿಲ್ಲ. ಆದ್ರೆ ರಾಜಕೀಯ ದಾಳ‌ ಹೇಗೆ ಬೀಳುತ್ತೊ ಯಾರು ಬಲ್ಲರು.? ಆದ್ರೆ ಆಪರೇಷನ್ ಆತಂಕ ಮಾತ್ರ ಇನ್ನೂ ಜಾಸ್ತಿಯಾಗಿದೆ ಅನ್ನೋದು ಮಾತ್ರ ಸತ್ಯ.

Leave a Reply