ಬಿಜೆಪಿ ಶಾಸಕರು ಬರೊವರ್ಗು ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್ ಭಾಗ್ಯ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ಹಿರಿಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿಎಲ್ ಪಿ ಸಭೆ ಹೆಸರಲ್ಲಿ ತಮ್ಮ ಶಾಸಕರನ್ನು ವಿಧಾನ ಸೌಧಕ್ಕೆ ಕರೆಸಿಕೊಂಡ ಕಾಂಗ್ರೆಸ್ ನಾಯಕರು ನಂತರ ಅವರನ್ನು ನೇರವಾಗಿ ರೆಸಾರ್ಟ್ ಗೆ ಕಳುಹಿಸಲಾಗಿದೆ. ಸದ್ಯ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಹೇಳಿಕೆ ಪ್ರಕಾರ ಬಿಜೆಪಿ ಶಾಸಕರು ಗುರುಗ್ರಾಮದ ರೆಸಾರ್ಟ್ ನಿಂದ ಬಿಡುಗಡೆಯಾಗುವವರೆಗೂ ಬಿಜೆಪಿ ಶಾಸಕರು ರೆಸಾರ್ಟ್ ನಿಂದ ಹೊರ ಬರುವುದಿಲ್ಲ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದಿಷ್ಟು,

‘ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ. ದೆಹಲಿಗೆ ಹೋಗಿಲ್ಲ. ರೆಸಾರ್ಟ್‍ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವುದಿಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂವಾದ ನಡೆಸಲಾಗುತ್ತದೆ. ಶಾಸಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಬಿಜೆಪಿ ಹಣದ ಆಸೆ ನೀಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಇಂತಹ ಕೆಲಸಕ್ಕೆ ಕೈ ಹಾಕದೆ ಇದ್ದಿದ್ದರೆ ಯಾರೂ ರೆಸಾರ್ಟ್‍ಗೆ ಹೋಗುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿರಬೇಕು ಎಂಬ ಉದ್ದೇಶಕ್ಕೆ ರೆಸಾರ್ಟ್‍ಗೆ ಕಳುಹಿಸಲಾಗಿದೆ ಎಂದರು. ಒಂದೇ ರೆಸಾರ್ಟ್‍ನಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದ್ದರಿಂದ ಎರಡು ರೆಸಾರ್ಟ್‍ನಲ್ಲಿ ಇರಿಸಲಾಗಿತ್ತು. ಇಂದು ಒಂದೇ ರೆಸಾರ್ಟ್‍ಗೆ ಸ್ಥಳಾಂತರಗೊಳ್ಳುತ್ತಾರೆ. ಮನೆಗಳಲ್ಲೂ ಸಹ ಅಷ್ಟು ಜನರು ಒಂದೆಡೆ ಇರಿಸಲು ಸಾಧ್ಯವಿಲ್ಲ. ಹಾಗಾಗಿ ರೆಸಾರ್ಟ್‍ಗೆ ಬರಲಾಗಿದೆ ಎಂದು ಹೇಳಿದರು. ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ಗೈರಾದವರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೋಟೀಸ್ ನೀಡಿದ್ದಾರೆ. ಅದಕ್ಕೆ ಉತ್ತರ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು.’

Leave a Reply