ರಮೇಶ್ ಜಾರಕಿಹೊಳಿಗೆ ನೋಟಿಸ್! ಅನರ್ಹರಾಗುತ್ತಾರಾ ಮಾಜಿ ಸಚಿವ?

ಡಿಜಿಟಲ್ ಕನ್ನಡ ಟೀಮ್:

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಶಾಸಕತ್ವದಿಂದ ಅನರ್ಹತೆ ಮಾಡುವ ವಿಚಾರವಾಗಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಶೋಕಾಸ್‌ ನೋಟಿಸ್ ನೀಡಿದ್ದಾರೆ.

ಈ ನೋಟಿಸ್ ನಲ್ಲಿ ನೀಡಿರುವ ಸ್ಪಷ್ಟನೆ ಹೀಗಿದೆ…

‘ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಉಂಟಾಗಿರುವ ತೀವ್ರತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಈ ಮಹತ್ವದ ಸಭೆಯಲ್ಲಿ ತಾವು ತಪ್ಪದೇ ಹಾಜರಾಗಬೇಕೆಂದು ನಾನು ನಿಮಗೆ ನೋಟಿಸ್ ನೀಡಿದ್ದೆವು. ಅಲ್ಲದೆ, ಒಂದು ವೇಳೆ ನೀವು ಸಭೆಗೆ ಹಾಜರಾಗದಿದ್ದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯತ್ವವನ್ನು ಸ್ವಇಚ್ಛೆಯಿಂದ ಬಿಟ್ಟಿರುವಿರಿ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದರೂ ಸಹ ನೀವು ಸಭೆಯಲ್ಲಿ ಭಾಗವಹಿಸಿರಲಿಲ್ಲ. ತಮ್ಮ ಗೈರು ಹಾಜರಿ ಬಗ್ಗೆ ಸೂಕ್ತ ಕಾರಣಗಳನ್ನೂ ನೀಡಿಲ್ಲ. ಹೀಗಾಗಿ, ತಮ್ಮ ಅನುಪಸ್ಥಿತಿಯನ್ನು ಗಮನಿಸಿದರೆ ತಾವು ಸ್ವಇಚ್ಛೆಯಿಂದಲೇ ಗೈರುಹಾಜರಾಗಿರುವುದು ಕಂಡುಬರುತ್ತದೆ.

ಅಲ್ಲದೆ, ತಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವುದಾಗಿ ಕಳೆದ ಹತ್ತಾರು ದಿನಗಳಿಂದ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಬೆಂಗಳೂರು, ಮುಂಬೈ, ಹೊಸದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೀರೆಂದು ಪ್ರಕಟವಾಗಿದೆ. ಅದನ್ನು ತಾವು ಇಲ್ಲಿಯವರೆಗೆ ನಿರಾಕರಿಸಿಲ್ಲ. ಈ ನಿಮ್ಮ ಪ್ರವೃತ್ತಿ ಗಮನಿಸಿದರೆ ತಾವು ಸ್ವಇಚ್ಛೆಯಿಂದಲೇ ಕಾಂಗ್ರೆಸ್ ಸದಸ್ಯತ್ವ ತೊರೆಯುತ್ತೀರಿ ಎಂದು ಕಾಣುತ್ತದೆ. ಜೊತೆಗೆ, ಪಕ್ಷದ ಹಿತವನ್ನು ಕಡೆಗಣಿಸಿದ್ದೀರಿ. ಈ ನಡವಳಿಕೆ ಭಾರತೀಯ ಸಂವಿಧಾನದ ಪ್ರಕಾರ ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಅವಕಾಶವಿರುತ್ತದೆ.’

Leave a Reply