ಪ.ಬಂಗಾಳದಲ್ಲಿ ಪ್ರಧಾನಿ ಮೋದಿ ವಿರುದ್ಧ ಸಿಡಿದ ಪ್ರಾದೇಶಿಕ ಶಕ್ತಿ!

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರವನ್ನು ಮಣಿಸಲು ವಿರೋಧ ಪಕ್ಷಗಳು ಅನೇಕ ರಣತಂತ್ರ ರೂಪಿಸುತ್ತಿವೆ. ಅವುಗಳಲ್ಲಿ ಕಾಂಗ್ರೆಸ್ ನ ಮಹಾಘಟಬಂಧನ, ಉತ್ತರ ಪ್ರದೇಶದ ಎಸ್ಪಿ- ಬಿಎಸ್ಪಿ ಮೈತ್ರಿ, ಕೆಸಿಆರ್ ನೇತೃತ್ವದ ತೃತೀಯ ರಂಗ ಸೇರಿ ಅನೇಕ ತಂತ್ರಗಾರಿಕೆ ನಡೆಯುತ್ತಲೇ ಇವೆ. ಈ ಮಧ್ಯೆ ಶನಿವಾರ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳು ಸಭೆ ನಡೆಸಿ, ಮೋದಿ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಒಕ್ಕೂಟ ಭಾರತ ಸಮಾವೇಶವನ್ನು ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಹುತೇಕ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಕೇಂದ್ರದ ವಿರುದ್ಧ ಗುಡುಗಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶತ್ರುಜ್ಞ ಸಿನ್ಹಾ, ಅರುಣ್ ಶೌರಿ, ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ಅರವಿಂದ್​ ಕೇಜ್ರಿವಾಲ್ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಫಾರೂಖ್​ ಅಬ್ದುಲ್ಲಾ, ಓಮರ್​ ಅಬ್ದುಲ್ಲಾ, ಅಖಿಲೇಶ್ ಯಾದವ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿ 20ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷದ ನಾಯಕರು ಪಾಲ್ಗೊಂಡಿದ್ದರು.

ನಾಯಕರು ಏನೆಂದರು?

ಯಶ್ವಂತ ಸಿನ್ಹಾ: ಈ ದೇಶದ ಆರ್ಥಿಕತೆ ವಿಫಲವಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದೇ ಪ್ರಮುಖ ವಿಚಾರವಾಗಿ, ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು.

ಫಾರೂಖ್ ಅಬ್ದುಲ್ಲಾ: ವಿದ್ಯುನ್ಮಾನ ಮತಯಂತ್ರಗಳನ್ನು ಕಳ್ಳ ಯಂತ್ರಗಳು ಎಂದು ಕರೆದಿದ್ದಾರೆ.

ಮಮತಾ ಬ್ಯಾನರ್ಜಿ: ಸಿನ್ಹಾ ಅವರು ಹೇಳಿದಂತೆ ಎಲ್ಲ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು.

ಎಚ್.ಡಿ.ಕುಮಾರಸ್ವಾಮಿ: ಜಗತ್ತಿನಲ್ಲೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಇಂದು ಕೇಂದ್ರದಲ್ಲಿರುವ ನಾಯಕರು ಅಸಂವಿಧಾನಿಕ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಅಗೌರವ ಸೂಚಿಸುತ್ತಿದ್ದಾರೆ. ದೇಶದ ಪ್ರಗತಿ, ರೈತರ ಬಗ್ಗೆ ಗಮನ ಹರಿಸದೆ, ಒಡೆದಾಳುವ ರಾಜಕೀಯ ಮಾಡುತ್ತಿದ್ದಾರೆ. ನೋಟು ಅಮಾನ್ಯೀಕರಣದಂತಹ ಅವೈಜ್ಞಾನಿಕ ಕ್ರಮದಿಂದಾಗಿ ದೇಶ ಹಲವು ಸಮಸ್ಯೆಗಳನ್ನು ಎದುರಿಸವಂತಾಯಿತು. ಕಪ್ಪು ಹಣದ ಮೇಲೆ ನಿಯಂತ್ರಣ ತರುವುದಾಗಿ ಹೇಳಿದ್ದರು. ಆದರೆ, ಅದೂ ಸಾಧ್ಯವಾಗಲಿಲ್ಲ. ಗ್ರಾಮೀಣ ಪ್ರದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಬಿಜೆಪಿ ಸರ್ಕಾರ ರೈತರು ಮತ್ತು ಬಡಜನರಿಗೆ ಸಮರ್ಪಕ ಯೋಜನೆ, ಪರಿಹಾರವನ್ನು ನೀಡುತ್ತಿಲ್ಲ. ರೈತರು ದಿನನಿತ್ಯದ ಖರ್ಚು ವೆಚ್ಚದಿಂದ ಹೈರಾಣಾಗಿದ್ದಾರೆ.

ಎಂ.ಕೆ.ಸ್ಟಾಲಿನ್: ಮೋದಿ ಅವರನ್ನು ನೀವೇಕೆ ವಿರೋಧಿಸುತ್ತೀರಾ ಎಂದು ತುಂಬಾ ಮಂದಿ ಕೇಳುತ್ತಾರೆ. ಯಾವ ವ್ಯಕ್ತಿ ದೇಶದ ವಿರೋಧವಿರುತ್ತಾನೋ ನಾನು ಆತನನ್ನು ವಿರೋಧಿಸುತ್ತೇನೆ. ನಾನು ನರೇಂದ್ರ ಅವರ ಒಡೆದಾಳುವ ರಾಜಕೀಯಕ್ಕೆ ಅವರನ್ನು ವಿರೋಧಿಸುತ್ತೇನೆ. ಅದು ಬಿಟ್ಟು ವೈಯಕ್ತಿಕವಾಗಿ ಅವರನ್ನು ದ್ವೇಷಿಸುವುದಿಲ್ಲ.

Leave a Reply